ಭತ್ತ ಖರೀದಿ: ರೈಸ್ ಮಿಲ್ ಗಳ ಭದ್ರತಾ ಠೇವಣಿಗೆ ಪರ್ಯಾಯಕ್ಕೆ ಕುಮಾರಸ್ವಾಮಿ ಸೂಚನೆ

Update: 2019-01-09 16:31 GMT

ಬೆಂಗಳೂರು, ಜ. 9: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಅಕ್ಕಿಮಿಲ್ ಗಳು ಠೇವಣಿ ಇಡುವುದಕ್ಕೆ ಪರ್ಯಾಯ ಉಪಾಯ ರೂಪಿಸುವ ಕುರಿತು ಕೂಡಲೇ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈಸ್ ಮಿಲ್ ಗಳ ಮಾಲಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಬದಲಿಸಿದ್ದು, ಇದರನ್ವಯ ರೈತರು ನೇರವಾಗಿ ಮಿಲ್ ಮಾಲಕರಿಗೆ ಭತ್ತ ನೀಡಬೇಕು.

ಮಿಲ್ ಗಳು ಭತ್ತದಿಂದ ಅಕ್ಕಿ ತಯಾರಿಸಿ, ಆಹಾರ ನಿಗಮದ ಮೂಲಕ ಅಕ್ಕಿ ಪೂರೈಸಬೇಕು. ಈ ವಿಧಾನದಲ್ಲಿ ದಾಸ್ತಾನು ಮಾಡುವ ರೈತರ ಭತ್ತಕ್ಕೆ ಭದ್ರತೆಯಾಗಿ ಮಿಲ್ ಮಾಲಕರು ಠೇವಣಿ ಇಡಬೇಕು ಎಂದು ಸೂಚಿಸಲಾಗಿದೆ. ಆದರೆ, ಮಿಲ್ ಮಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಹೆಚ್ಚಿನ ಮಿಲ್ ಮಾಲಕರು ಭತ್ತ ಖರೀದಿಗೆ ತಮ್ಮ ಮಿಲ್ ಅನ್ನು ನೋಂದಾಯಿಸಲು ಅಸಹಾಯಕರಾಗಿದ್ದು, ಇದರ ಬದಲಿಗೆ ಆಸ್ತಿ ಅಡಮಾನ, ಪೋಸ್ಟ್ ಡೇಟೆಡ್ ಚೆಕ್ ಪಡೆಯುವುದು ಅಥವಾ ಇನ್ನಾವುದೇ ಮಾರ್ಗೋಪಾಯ ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅಲ್ಲದೆ, ರೈಸ್‌ಮಿಲ್ ಮಾಲಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಶೀಘ್ರವೇ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆಯೂ ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಪರಿಷತ್ ಸದಸ್ಯ ಮರಿತಿಬ್ಬೆಗೌಡ, ಶಾಸಕ ಸಿ.ಎನ್.ಬಾಲಕೃಷ್ಣ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News