ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

Update: 2019-01-09 16:41 GMT

ಬೆಂಗಳೂರು, ಜ.9: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಎರಡನೇ ದಿನ ಬೆಂಗಳೂರು ನಗರದಲ್ಲಿ ಬಸ್‌ಗಳಿಗೆ ಕಲ್ಲುತೂರಾಟ ನಡೆಯಿತು. ಹೀಗಾಗಿ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಮುಷ್ಕರದ ಅಂಗವಾಗಿ ಮೊದಲನೇ ದಿನ ಮುಷ್ಕರಕ್ಕೆ ಬೆಂಬಲಿಸಿದ್ದ ಸಾರಿಗೆ ಸಂಸ್ಥೆ ಎರಡನೇ ದಿನ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳನ್ನು ರಸ್ತೆಗೆ ಇಳಿಸಲು ಸಿದ್ಧತೆಯನ್ನು ನಡೆಸಲಾಗಿತ್ತು. ಇಂದು ಬಸ್‌ಗಳು ಸಂಚಾರ ಮಾಡಲಾಗುತ್ತದೆ ಎಂದು ಘೋಷಣೆಯನ್ನು ಮಾಡಲಾಗಿತ್ತು. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಬಂದಿದ್ದರೂ, ಬಸ್‌ಗಳಿಲ್ಲದಿದ್ದರಿಂದ ಪರದಾಡುವಂತಾಯಿತು. ಶಾಲಾ-ಕಾಲೇಜುಗಳಿಗೆ ತೆರಳುವವರಿಗೆ, ಆಸ್ಪತ್ರೆಗಳಿಗೆ ಹೋಗುವವರಿಗೆ, ಸಂಬಂಧಿಕರನ್ನು ಭೇಟಿ ಮಾಡಲು ದೂರದ ಸ್ಥಳಗಳಿಂದ ಬಂದಿದ್ದ ಜನರು ಬಸ್‌ಗಳಿಗಾಗಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದರು. ಬುಧವಾರ ಬೆಳಗ್ಗೆ ಎಂದಿನಂತೆ ಸಂಚಾರ ಆರಂಭಿಸಲು ಬಿಎಂಟಿಸಿ ಮುಂದಾಗಿತ್ತು. ಆದರೆ, ಅಡಕಮಾರನಹಳ್ಳಿ, ಜಾಲಹಳ್ಳಿ, ವಿಮಾನ ನಿಲ್ದಾಣ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಕಲ್ಲುತೂರಾಟ ನಡೆದಿದ್ದರಿಂದ ಬಸ್‌ಗಳನ್ನು ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಈ ನಡುವೆ ಬಿಎಂಟಿಸಿ ಏಕಾಏಕಿ ಬಸ್ ಸಂಚಾರವನ್ನು ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಬಿಎಂಟಿಸಿ ಮೆಜೆಸ್ಟಿಕ್ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಎಂಟಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿಕ ಚಕಮಕಿ ನಡೆದು, ದೊಡ್ಡ ಗದ್ದಲವೇ ಸೃಷ್ಟಿಯಾಗಿತ್ತು.

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಗಂಟೆಗೊಂದು ಬಸ್ ಸಂಚಾರ ಮಾಡುತ್ತಿದ್ದರೂ, ಅದರಲ್ಲಿ ಜನ ತುಂಬಿ ತುಳುಕುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ಆದರೆ, ಮಧ್ಯಾಹ್ನದ ವೇಳೆಗೆ ಬಿಎಂಟಿಸಿ ಸಂಪೂರ್ಣ ಬಸ್‌ಗಳ ಸಂಚಾರಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಯಿತು.

ಇಎಸ್‌ಐ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳಲು ಇವತ್ತು ಸಮಯ ಕೊಟ್ಟಿದ್ದರು. ಅದಕ್ಕಾಗಿ ಬೆಳಗ್ಗೆಯೇ ದೊಡ್ಡಬಳ್ಳಾಪುರದಿಂದ ಇಲ್ಲಿಗೆ ಬಂದೆ. ಆದರೆ, ಒಂದೇ ಒಂದು ಬಸ್ ಇಲ್ಲ. ಆಸ್ಪತ್ರೆಯವರು ಹೇಳಿದ ದಿನವೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಬೇರೆ ದಿನಾಂಕ ಬೇಕಾದರೆ ಮತ್ತೊಂದು ದಿನ ಸಿಗುವವರೆಗೂ ಕಾಯಬೇಕು.

-ಮಂಜುನಾಥ್, ದೊಡ್ಡಬಳ್ಳಾಪುರ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ ಮಗಳನ್ನು ನೋಡಿಕೊಂಡು ಹೋಗಲು ಬೆಂಗಳೂರಿಗೆ ಬಂದಿದ್ದೇನೆ. ಈ ಬಂದ್ ಅಂತ ಅನ್ನೋದೇನು ನನಗೆ ಗೊತ್ತಿಲ್ಲ. ರೈಲಿನಲ್ಲಿ ಬೆಳಗ್ಗೆ 6 ಗಂಟೆಗೆ ಬಂದೆ. ಆದರೆ, ಬಸ್ ಸಿಗಲಿಲ್ಲ. ಇಲ್ಲಿ ಬಸ್‌ಸ್ಟಾಪ್‌ನಲ್ಲಿ ಚಳಿಯಲ್ಲಿಯೇ ಮುದುಡಿಕೊಂಡು ಕುಳಿತುಕೊಂಡು ಬಸ್‌ಗಾಗಿ ಕಾಯ್ತಿದೀನಿ.

-ರುದ್ರಪ್ಪ, ರಾಮದುರ್ಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News