ರೋಷನ್ ಬೇಗ್ ಸೇರಿದಂತೆ ಹಲವರಿಂದ ಆಸ್ತಿ ಕಬಳಿಕೆ: ಎನ್.ಆರ್.ರಮೇಶ್ ಆರೋಪ

Update: 2019-01-09 16:43 GMT

ಬೆಂಗಳೂರು, ಜ.9: ಶಿವಾಜಿನಗರ ಶಾಸಕ ರೋಷನ್ ಬೇಗ್ ಸೇರಿದಂತೆ ಹಲವರು ಸುಮಾರು 12 ಕೋಟಿ ರೂ. ಅಧಿಕ ಮೌಲ್ಯದ 4 ಸಾವಿರ ಚ.ಅಡಿ ವಿಸ್ತೀರ್ಣದ ಬಿಬಿಎಂಪಿ ಸೊತ್ತನ್ನು ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್. ಆರ್.ರಮೇಶ್ ಆರೋಪಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರಾದ ರೋಷನ್ ಬೇಗ್, ಎನ್.ಎ.ಹಾರಿಸ್, ಮಾಜಿ ಪಾಲಿಕೆ ಸದಸ್ಯ ಎಂ.ಬಿ.ಗೋವಿಂದರಾಜು ಸೇರಿದಂತೆ 43 ಜನರ ಮೇಲೆ ಸರಕಾರಿ ಭೂ-ಕಬಳಿಕೆ, ಅತಿಕ್ರಮ ಪ್ರವೇಶ, ವಂಚನೆ, ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಕ್ರಿಮಿನಲ್ ಆರೋಪದಡಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬಳಿಯಿರುವ 4 ಸಾವಿರ ಚ.ಅಡಿ ಪಾಲಿಕೆ ಸೊತ್ತನ್ನು ಕಬಳಿಸಿದ್ದಾರೆ ಎಂದ ಅವರು, 12/01ನೇ ಸಂಖ್ಯೆಯ ಸ್ವತ್ತನ್ನು 1993ರಂದು 99 ವರ್ಷಗಳಿಗೆ ಹಾಗೂ 14/01ನೆ ಸಂಖ್ಯೆಯ ನಂಬರಿನ ಸ್ವತ್ತನ್ನು 2004ರಂದು 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಎರಡು ಪ್ರತ್ಯೇಕ ಅವಧಿಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಗುತ್ತಿಗೆ ನೀಡಿರುವ ಎರಡು ಸೊತ್ತುಗಳ ಒಟ್ಟು ವಿಸ್ತೀರ್ಣ 36,457.5 ಚ.ಅಡಿಗಳಾಗಿವೆ ಎಂದರು.

ಕೆಪಿಸಿಸಿ ಕಚೇರಿಗೆ ಹೊಂದಿಕೊಂಡಂತಿರುವ 12,024 ಚ.ಅಡಿ ವಿಸ್ತೀರ್ಣದ ಸೊತ್ತನ್ನು ಎಸ್ಸಿ/ಎಸ್ಟಿ ಪದವೀಧರರ ಸಂಘಕ್ಕೆ 1977ರಂದು 99 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಈಗಾಗಲೇ ಸಂಘವು ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಪಾಲಿಕೆಯು ಆ ಸೊತ್ತನ್ನು ವಾಪಸ್ಸು ಪಡೆದುಕೊಳ್ಳಲು ಕಾನೂನು ಪ್ರಕರಣ ದಾಖಲಿಸಿದೆ ಎಂದು ಮಾಹಿತಿ ನೀಡಿದರು.

ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಾಣ ಮಾಡದೇ ಷರತ್ತು ಉಲ್ಲಂಘಿಸಿದ್ದು, ಈ ಬಗ್ಗೆ ಪಾಲಿಕೆ ಹಲವಾರು ಬಾರಿ ನೋಟಿಸ್ ನೀಡಿದೆ. ಇದೀಗ ತನ್ನ ಕಚೇರಿಯ ಪಕ್ಕದ ಸ್ವತ್ತು ಖಾಲಿ ಇದ್ದಿದ್ದರಿಂದ ಅದನ್ನು ಕಬಳಿಸಲು ಕೆಪಿಸಿಸಿ ಸಂಚು ರೂಪಿಸಿದೆ ಎಂದು ಆರೋಪಿಸಿದರು.

ಸಂಘಕ್ಕೆ ಗುತ್ತಿಗೆ ನೀಡಿದ್ದ 12,024 ಚ.ಅಡಿ ಸೊತ್ತಿನ ಪೈಕಿ ಸುಮಾರು 12ರಿಂದ 15 ಕೋಟಿ ರೂ. ಮೌಲ್ಯದ 4 ಸಾವಿರ ಚ.ಅಡಿ ವಿಸ್ತೀರ್ಣದ ಸೊತ್ತನ್ನು ಕೆಪಿಸಿಸಿ ರಾತ್ರೋರಾತ್ರಿ ಕಬಳಿಸಿದೆ ಎಂದು ಆರೋಪಿಸಿದ್ದಾರೆ.

ಅಂತೆಯೇ ಇದೇ ಮಿಲ್ಲರ್ ಟ್ಯಾಂಕ್ ಬಂಡ್ ಪ್ರದೇಶದ ಉಳಿದ 17ಎಕರೆ ವಿಸ್ತೀರ್ಣದ 2,200 ಕೋಟಿ ಮೌಲ್ಯದ ಪಾಲಿಕೆ ಸೊತ್ತನ್ನು 43 ಮಂದಿ ಕಾಂಗ್ರೆಸ್ ಮುಖಂಡರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News