ಹೊಸ ಜಾಹೀರಾತು ನೀತಿ ಜ.22ರೊಳಗೆ ಜಾರಿಗೆ ತರಲು ಹೈಕೋರ್ಟ್ ಸೂಚನೆ

Update: 2019-01-09 16:51 GMT

ಬೆಂಗಳೂರು, ಜ.9: ಜಾಹೀರಾತು ಹಾವಳಿ ತಡೆಗೆ ಹೊಸ ಜಾಹೀರಾತು ನೀತಿಯನ್ನು ಜ.22ರೊಳಗೆ ಜಾರಿಗೆ ತರಬೇಕೆಂದು ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಇ)ಗೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ. ನಗರ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಬೆಂಗಳೂರು ನಗರದಲ್ಲಿ ಫ್ಲೆಕ್ಸ್, ಹೋಡಿಂಗ್ಸ್, ಬ್ಯಾನರ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಜ.22ರೊಳಗೆ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ಪ್ರತಿಕ್ರಿಯಿಸಿ, ಬೆಂಗಳೂರು ನಗರವನ್ನು ಫ್ಲೆಕ್ಸ್, ಹೋಡಿಂಗ್ಸ್, ಬ್ಯಾನರ್‌ಗಳಿಂದ ಮುಕ್ತಗೊಳಿಸಬೇಕು. ಬ್ಯಾನರ್‌ಗಳನ್ನು ಹಾಕುವ ಜಾಗಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಜಾಹೀರಾತುಗಳನ್ನು ಹಾಕದಂತೆ ತಡೆಗಟ್ಟಲು ನಗರ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಸರಕಾರಕ್ಕೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News