ದೇಶವನ್ನು ವಿದೇಶಿ ಗುತ್ತಿಗೆದಾರರಿಗೆ ಒತ್ತೆ ಇಡುವ ಹುನ್ನಾರ: ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್ ಆರೋಪ

Update: 2019-01-09 16:59 GMT

ಬೆಂಗಳೂರು, ಜ.9: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಭಾರತ ದೇಶವನ್ನು ವಿದೇಶಿ ಗುತ್ತಿಗೆದಾರರಿಗೆ ಒತ್ತೆಯಿಡಲು ಮುಂದಾಗಿದೆ ಎಂದು ಎಐಟಿಯುಸಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಆರೋಪಿಸಿದ್ದಾರೆ. 

ದೇಶವ್ಯಾಪಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನದವರೆಗೂ ಸಾವಿರಾರು ಕಾರ್ಮಿಕರ ಬೃಹತ್ ರ್ಯಾಲಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಎಲ್ಲ ಸರಕಾರಿ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ 120 ಕೋಟಿ ಜನರ ಬದುಕನ್ನು ವಿದೇಶಿಗಳ, ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆಯಿಡಲು ಮುಂದಾಗಿದ್ದಾರೆ. ಕಾರ್ಪೊರೇಟ್‌ಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾ ಅವರಿಗೆ ಬೇಕಾದ ರೀತಿಯಲ್ಲಿ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

ದೇಶದಾದ್ಯಂತ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬಿಜೆಪಿ ನಾಯಕರು ‘ಶ್ರಾದ್ಧ’ಗೆ ಹೋಲಿಕೆ ಮಾಡಿದ್ದಾರೆ. ಆದರೆ, ಕೇಂದ್ರದ ಮೋದಿ ನೇತೃತ್ವದ ಸರಕಾರದ ‘ಫ್ಯಾಶಿಸಂನ ಶ್ರಾದ್ಧ ದಿನ’ ಸಮೀಪಿಸುತ್ತಿದೆ ಎಂಬುದು ಮರೆಯಬಾರದು. ಮುಷ್ಕರಕ್ಕೆ ಮುಂದಾಗಿರುವ ಕಾರ್ಮಿಕರೊಂದಿಗೆ ಸಭೆ ಮಾಡುವ ಕನಿಷ್ಠ ಸೌಜನ್ಯವಿಲ್ಲದ ಪ್ರಧಾನಿ ದೇಶದಲ್ಲಿದ್ದಾರೆ ಎನ್ನುವುದು ದುರಂತ ಎಂದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಕಾರ್ಮಿಕರ ಮುಷ್ಕರವನ್ನು ಕೆಲವರು ಸಮಯ ವ್ಯರ್ಥ ಮಾಡಲು ನಡೆಸುವುದು ಎಂದುಕೊಂಡಿದ್ದಾರೆ. ಆದರೆ, ನಮ್ಮ ಕಾರ್ಮಿಕರ ಮುಷ್ಕರದಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗಣನೀಯವಾದ ಪರಿಣಾಮ ಬೀರುತ್ತದೆ. ದೇಶದಾದ್ಯಂತ ಕೋಟ್ಯಂತರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದ್ದು, ಸಾವಿರಾರು ಕೋಟಿ ಆರ್ಥಿಕ ವಹಿವಾಟು ವ್ಯತ್ಯಯವಾಗಿದೆ ಎಂದು ಹೇಳಿದರು.

ಕಾರ್ಮಿಕರು ಕ್ರಿಮಿನಲ್‌ಗಳಲ್ಲ: ಅಧಿಕಾರದಲ್ಲಿರುವ ಸರಕಾರಗಳು, ಕಾರ್ಖಾನೆ ಮಾಲಕರು ಕಾರ್ಮಿಕರನ್ನು ಕ್ರಿಮಿನಲ್‌ಗಳಂತೆ ಕಾಣುತ್ತಿದ್ದಾರೆ. ಆದರೆ, ಕಾರ್ಮಿಕರು ಕ್ರಿಮಿನಲ್‌ಗಳಲ್ಲ, ಅವರು ಈ ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆ ಬಲಪಡಿಸಲು ದುಡಿಯುತ್ತಿರುವವರಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಕೋಟ್ಯಂತರ ಕಾರ್ಮಿಕರು ಬೀದಿಗಿಳಿದು ಮುಷ್ಕರದ ಮೂಲಕ ಎಚ್ಚರಿಕೆ ನೀಡಿದ್ದರೂ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡಲು ಮುಂದಾಗಿದೆ. ಅಂದರೆ, ಸರಕಾರ ಯಾವ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಅಂಗನವಾಡಿ, ಆಶಾ, ಬಿಸಿಯೂಟ ಸೇರಿದಂತೆ ಯಾವುದೇ ಸಾರ್ವಜನಿಕ ಹಾಗೂ ಸರಕಾರಿ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ಮುಷ್ಕರ ಯಾವುದೇ ರಾಜಕೀಯ ಪ್ರೇರಿತವಾದುದು ಅಲ್ಲ. ದೇಶದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರಶ್ನಿಸಿ ಹಾಗೂ ಸಾಮಾನ್ಯ ಜನರ ಪರವಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸುತ್ತಿರುವವರು ಈ ಕುರಿತು ಸ್ಪಷ್ಟತೆ ಪಡೆದುಕೊಳ್ಳಬೇಕು ಎಂದು ಅನಂತಸುಬ್ಬರಾವ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News