ಫೆ.10ರಂದು ಕೆಎಂಸಿಸಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-01-09 17:00 GMT

ಬೆಂಗಳೂರು, ಜ.9: ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್(ಕೆಎಂಸಿಸಿ) ವತಿಯಿಂದ ಫೆ.10ರಂದು ಬೆಳಗ್ಗೆ 10 ಗಂಟೆಗೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆಎಂಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ನೌಶಾದ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 70 ಜೋಡಿಗಳಿಗೆ ವಿವಾಹ ಮಾಡಿಸಬೇಕೆಂಬ ಗುರಿ ಹೊಂದಿದ್ದು, ಈಗಾಗಲೆ ಸುಮಾರು 50 ಜೋಡಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಜ.20ರೊಳಗಾಗಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ವರ ಹಾಗೂ ವಧುವಿನ ಪೂರ್ಣ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಪೋಷಕರ ಆಧಾರ್ ಕಾರ್ಡ್ ಪ್ರತಿಗಳು, ಇಬ್ಬರು ಸಾಕ್ಷಿಗಳ ವಿವರ ಹಾಗೂ ಸ್ಥಳೀಯ ಮಸೀದಿಯಿಂದ ನಿರಾಪೇಕ್ಷಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕಿದೆ ಎಂದು ಅವರು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಮುಹಮ್ಮದ್ ನೌಶಾದ್-98452 51255, ಅಬು ಭಾಯ್-98453 50626, ಮೌಲಾನ ಮುಹಮ್ಮದ್ ಅಶ್ರಫ್ ಅಲಿ ರಶಾದಿ- 99456 40231ಗೆ ಸಂಪರ್ಕಿಸಬಹುದಾಗಿದೆ ಎಂದು ನೌಶಾದ್ ತಿಳಿಸಿದರು.

ರಾಜ್ಯ ಹಾಗೂ ಹೊರ ರಾಜ್ಯದವರು ವಿವಾಹಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಮ್ಮ ಸಂಘಟನೆಯು ಬೆಂಗಳೂರಿನಲ್ಲಿ 31 ಶಾಖೆಗಳನ್ನು ಹೊಂದಿದ್ದು, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ದಿಲ್ಲಿಯಲ್ಲದೇ, 19 ದೇಶಗಳಲ್ಲಿ ಸಂಘಟನೆಯ ಘಟಕಗಳಿವೆ ಎಂದು ನೌಶಾದ್ ಹೇಳಿದರು.

ಕೆಎಂಸಿಸಿ ವತಿಯಿಂದ ನಿಮ್ಹಾನ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಿಸಿರುವ ‘ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ’ ಕೇಂದ್ರವನ್ನು ಮಾರ್ಚ್ 3ರಂದು ಉದ್ಘಾಟಿಸಲಾಗುತ್ತಿದೆ. ಈ ಕೇಂದ್ರದಲ್ಲಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ಬಡ ಒಳರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು ಉಚಿತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅಲ್ಲದೆ, ಮಾಹಿತಿ ಕೇಂದ್ರ, ಸಮ್ಮೇಳನ ಸಭಾಂಗಣ, ಆ್ಯಂಬುಲೆನ್ಸ್ ಸೌಲಭ್ಯ, ಪ್ರಾರ್ಥನಾ ನಿಲಯ, ರಕ್ತ ನಿಧಿ, ವಿದ್ಯಾರ್ಥಿಗಳ ಹಾಸ್ಟೆಲ್, ವೈದ್ಯಕೀಯ ಮಾರ್ಗದರ್ಶನ ಕೇಂದ್ರ ಸೇರಿದಂತೆ ಇನ್ನಿತರ ಸೌಲಭ್ಯಗಳು ಈ ಹ್ಯುಮಾನಿಟಿ ಕೇಂದ್ರದಲ್ಲಿ ಲಭ್ಯವಿರುತ್ತದೆ ಎಂದು ನೌಶಾದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಮುಹಮ್ಮದ್ ಅಶ್ರಫ್ ಅಲಿ ರಶಾದಿ, ಸುಬೇರ್ ಕಾಯಕ್ಕೋಡಿ, ನವೀಮ್, ಹಾಜಿ ಭಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News