ಕೇಂದ್ರ ಸರಕಾರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ: ಅಸ್ಸಾಂ ಸರ್ಕಾರದ ಎಲ್ಲ ಎಜಿಪಿ ಸಚಿವರ ರಾಜೀನಾಮೆ

Update: 2019-01-10 04:20 GMT
ಅತುಲ್ ಬೋರಾ - ಕೇಶವ್ ಮಹಾಂತ - ಫಣಿಭೂಷಣ್ ಚೌಧರಿ

ಗುವಾಹತಿ, ಜ. 10: ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿ ಈಗಾಗಲೇ ಎನ್‌ಡಿಎ ಕೂಟದಿಂದ ಹೊರ ನಡೆದಿರುವ ಅಸ್ಸಾಂ ಗಣ ಪರಿಷತ್ (ಎಜಿಪಿ)ನ ಎಲ್ಲ ಮೂವರು ಸಚಿವರು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೊನೋವಾಲ್ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ. 

ವಿವಿಧ ನಿಗಮ ಮಂಡಳಿಗಳ ಮುಖ್ಯಸ್ಥರ ಹುದ್ದೆಗಳಿಗೆ ಕೂಡಾ ಆರು ಮಂದಿ ಎಜಿಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.

ಎಜಿಪಿ ಅಧ್ಯಕ್ಷರೂ ಆಗಿರುವ ಸಚಿವ ಅತುಲ್ ಬೋರಾ, ಕಾರ್ಯಾಧ್ಯಕ್ಷ ಮತ್ತು ಸಚಿವ ಕೇಶವ್ ಮಹಾಂತ ಹಾಗೂ ಫಣಿಭೂಷಣ್ ಚೌಧರಿ ರಾಜೀನಾಮೆ ಸಲ್ಲಿಸಿದ್ದಾರೆ.

ಜಂಟಿ ಸಂಸದೀಯ ಸಮಿತಿ  ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ- 2016ನ್ನು ಮಂಡಿಸಿದ ತಕ್ಷಣ, ಬೋರಾ ತಮ್ಮ ನಿರ್ಧಾರ ಪ್ರಕಟಿಸಿ, ಎನ್‌ಡಿಎ ಕೂಟದಿಂದ ಹೊರ ನಡೆಯುವುದಾಗಿ ಘೋಷಿಸಿ, ಎಲ್ಲ ಸಚಿವರು ಸರ್ವಾನಂದ ಸೋನೊವಾಲ್ ಸರ್ಕಾರಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. 2016ರ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು.

ಈ ಮೈತ್ರಿಯಿಂದಾಗಿ ತರುಣ್ ಗೊಗೋಯ್ ನೇತೃತ್ವದ 15 ವರ್ಷಗಳ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವುದು ಸಾಧ್ಯವಾಗಿತ್ತು. 1980ರ ದಶಕದಲ್ಲಿ ವಲಸೆಗಾರ ವಿರೋಧಿ ಹೋರಾಟದ ಮೂಲಕವೇ ಎಜಿಪಿ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷ ಪೌರತ್ವ ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News