ಬುಲಂದ್ ಶಹರ್ ಪೊಲೀಸ್ ಅಧಿಕಾರಿಯ ಹತ್ಯೆ ಪ್ರಕರಣ: ಬಿಜೆಪಿ ಯುವ ಘಟಕದ ನಾಯಕ ಸೆರೆ

Update: 2019-01-10 09:52 GMT
ಶಿಖರ್ ಅಗರ್ವಾಲ್

ಲಕ್ನೋ, ಜ. 10: ಬುಲಂದ್ ಶಹರ್ ನಲ್ಲಿ ಕಳೆದ ಡಿ. 3ರಂದು ಗೋಹತ್ಯೆ ನಡೆದಿದೆಯೆಂಬ ಕಾರಣಕ್ಕೆ ನಡೆದ ಹಿಂಸಾಚಾರದ ಸಂದರ್ಭ ಗುಂಡೇಟಿಗೊಳಗಾಗಿ ಸಾವಿಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರೇ ಹಿಂಸಾಚಾರಕ್ಕೆ ಕಾರಣ ಎಂದು ದೂರಿ ವೀಡಿಯೊ ಬಿಡುಗಡೆ ಮಾಡಿದ್ದ ಶಿಖರ್ ಅಗರ್ವಾಲ್ ಎಂಬ ಸ್ಥಳೀಯ ಬಿಜೆಪಿ ಯುವ ಘಟಕದ ನಾಯಕನನ್ನು ಪೊಲೀಸರು ಬುಧವಾರ ತಡ ರಾತ್ರಿ ಬಂಧಿಸಿದ್ದಾರೆ.

ಗೋಹತ್ಯೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ದನದ ಮೃತದೇಹ ಕೊಂಡೊಯ್ಯಲು ತನ್ನನ್ನು ಹಾಗೂ ಇತರರನ್ನು ಸಿಂಗ್ ತಡೆದಿದ್ದೇ ಉದ್ವಿಗ್ನತೆಗೆ ಕಾರಣವಾಯಿತೆಂದು ಶಿಖರ್ ವೀಡಿಯೊದಲ್ಲಿ ಆರೋಪಿಸಿದ್ದನಲ್ಲದೆ, ಸಿಂಗ್ ತನ್ನನ್ನು ಹಾಗೂ ತನ್ನ ಸಹಚರರನ್ನು ಕೊಲ್ಲುವುದಾಗಿ ಬೆದರಿಸಿದ್ದರೆಂದೂ ದೂರಿದ್ದ. ನಂತರ ಹಿರಿಯ ಪೊಲೀಸ್ ಅಧಿಕಾರಿ ಚಂದ್ರ ಮೌರ್ಯ ಬಳಿ ಇದರ ಬಗ್ಗೆ ಹೇಳಿಕೊಂಡಿದ್ದಾಗಿ ತಿಳಿಸಿದ್ದ ಆತ ಸಿಂಗ್ 'ಭ್ರಷ್ಟ'ರಾಗಿದ್ದರು ಹಾಗೂ ಮುಸ್ಲಿಮರ ಪರ ವಹಿಸಿದ್ದರೆಂದೂ ದೂರಿದ್ದ.

ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳ ಕಾರ್ಯಕರ್ತ ಯೋಗೇಶ್ ರಾಜ್ ನನ್ನು ಘಟನೆ ನಡೆದು ಒಂದು ತಿಂಗಳ ನಂತರ ಕಳೆದ ವಾರ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News