ಮಹಿಳೆಯರು ಇನ್ನು ಮುಂದೆ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ!

Update: 2019-01-11 04:00 GMT

ಹೊಸದಿಲ್ಲಿ, ಜ.11: ಮಹಿಳೆಯರು ಇನ್ನು ಮುಂದೆ ಕೆಲ ರೈಲ್ವೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ..!

ಕೆಲಸ ಕಠಿಣ ಹಾಗೂ ಇಲ್ಲಿ ಅನುಕೂಲಕರ ಕೆಲಸದ ವಾತಾವರಣವಿಲ್ಲ ಎಂಬ ಕಾರಣ ನೀಡಿ, ಚಾಲಕ, ಪೋರ್ಟರ್, ಗಾರ್ಡ್‌ಗಳು ಮತ್ತು ಹಳಿ ಪರಿಶೀಲನೆ ನಡೆಸುವ ಗ್ಯಾಂಗ್‌ಮನ್ ಹುದ್ದೆಗಳನ್ನು ಪುರುಷರಿಗೇ ಮೀಸಲಿಡುವಂತೆ ಕೋರಿ ಭಾರತೀಯ ರೈಲ್ವೆಯು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ(DOPT)ಗೆ ಪತ್ರ ಬರೆದಿದೆ. ಈ ಉದ್ಯೋಗಗಳಿಗೆ ಕೇವಲ ಪುರುಷರನ್ನಷ್ಟೇ ನೇಮಕ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿದೆ.

ಹಲವು ಮಹಿಳಾ ಉದ್ಯೋಗಿಗಳು, ಈ ಕೆಲಸದಲ್ಲಿ ಅಸುರಕ್ಷಿತ ಹಾಗೂ ಕಠಿಣ ಕೆಲಸದ ವಾತಾವರಣವಿದೆ ಎಂದು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

"ರೈಲ್ವೆ ಮಂಡಳಿಯ ಮಾಜಿ ಅಧ್ಯಕ್ಷರಿಗೆ ಮಹಿಳಾ ಉದ್ಯೋಗಿಗಳಿಂದ ಬಂದ ದೂರುಗಳನ್ನು ಆಧರಿಸಿ, ಕೆಲ ಕೆಲಸಗಳಿಂದ ಮಹಿಳೆಯರಿಗೆ ವಿನಾಯ್ತಿ ನೀಡುವಂತೆ ಕೋರಿ ಈ ಶಿಫಾರಸು ಮಾಡಲಾಗಿದೆ. ಮಹಿಳೆಯರ ಸುರಕ್ಷೆ ಹಾಗೂ ಕೆಲಸದ ವಾತಾವರಣ ಮೂಲ ಕಳಕಳಿಯ ವಿಚಾರ. ಸದ್ಯ ಈ ಕೆಲಸಗಳು ಎಲ್ಲರಿಗೂ ಮುಕ್ತವಾಗಿವೆ" ಎಂದು ಭಾರತೀಯ ರೈಲ್ವೆಮಂಡಳಿಯ ಉದ್ಯೋಗಿ ಸದಸ್ಯ ಎಸ್.ಎನ್.ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ರೈಲ್ವೆಯಲ್ಲಿರುವ 13 ಲಕ್ಷ ಉದ್ಯೋಗಿಗಳ ಪೈಕಿ ಶೇಕಡ 2-3 ಮಾತ್ರ ಮಹಿಳೆಯರು. ಇದರಲ್ಲೂ ಮುಖ್ಯವಾಗಿ ಬಹುತೇಕ ಮಂದಿ ಡೆಸ್ಕ್ ಕೆಲಸ ಆಯ್ಕೆ ಮಾಡಿಕೊಂಡಿದ್ದಾರೆ. ಚಾಲಕರು, ಗಾರ್ಡ್‌ಗಳು ಹಾಗೂ ಗ್ಯಾಂಗ್‌ಮನ್‌ಗಳು ಯಾವುದೇ ಸಮಯದಲ್ಲಿ ಕೆಲಸಕ್ಕೆ ಲಭ್ಯರಿರಬೇಕಾಗುತ್ತದೆ.

"ಕೆಲ ಕೆಲಸಗಳು ಕಠಿಣವಾಗಿದ್ದರೂ, ರೈಲ್ವೆ ಲಿಂಗಾಧರಿತ ತಾರತಮ್ಯ ಮಾಡುವಂತಿಲ್ಲ. ಚಾಲನಾ ಸಿಬ್ಬಂದಿಯ ಕೆಲಸ ಕಷ್ಟವಾಗಿದ್ದರೂ, ಕೆಲಸದ ಸ್ವರೂಪದ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚುವರಿ ಪ್ರಯೋಜನಗಳು ಸಿಗುತ್ತವೆ. ರೈಲ್ವೆಯ ಈ ಪ್ರಸ್ತಾವಕ್ಕೆ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಅನುಮತಿ ನೀಡುವುದು ಅಸಂಭವ" ಎಂದು ಭಾರತೀಯ ರೈಲ್ವೆಯ ಸಂಚಾರಿ ವಿಭಾಗದ ನಿವೃತ್ತ ಉದ್ಯೋಗಿ ಶ್ರೀಪ್ರಕಾಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News