ಮಹಿಳೆ ಜತೆ ಅಳಿಯನ ಸಲುಗೆಯಿಂದ ಕೋಪಗೊಂಡ ಮಾವ ಮಾಡಿದ್ದೇನು ಗೊತ್ತೇ?

Update: 2019-01-11 04:18 GMT

ಹೊಸದಿಲ್ಲಿ, ಜ.11: ತನ್ನ ಸೋದರಳಿಯ ಮಹಿಳೆಯೊಬ್ಬಳ ಜತೆ ಸಲುಗೆಯಿಂದಿದ್ದಾನೆ ಎಂಬ ಹೊಟ್ಟೆಕಿಚ್ಚಿನಿಂದ ಆತನನ್ನು ಕೊಂದು ಮೃತದೇಹವನ್ನು ಹೂತುಹಾಕಿ ಅದರ ಮೇಲೆ ಗಿಡಗಳನ್ನು ನೆಟ್ಟ ಪ್ರಕರಣವೊಂದು ಮೂರು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.

ಎಂಜಿನಿಯರಿಂಗ್ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕನಾಗಿದ್ದ ಬಿಜಯ್ ಕುಮಾರ್ ಮಹಾರಾಣ ಎಂಬಾತ ಆರೋಪಿ. ಹೈದರಾಬಾದ್‌ನಲ್ಲಿ ಕಳೆದ ರವಿವಾರ ಈತನನ್ನು ಬಂಧಿಸಲಾಗಿತ್ತು. ಈತ ಈ ಕೃತ್ಯ ಎಸಗಲು ಹೊಟ್ಟೆಕಿಚ್ಚು ಕಾರಣ ಎನ್ನುವುದು ಪೊಲೀಸರು ತಿಳಿಸಿದ್ದಾರೆ.

ಮಾವನ ಕೋಪಕ್ಕೆ ಬಲಿಯಾದ ಜೈಪ್ರಕಾಶಸ್ ಮಹಾರಾಣಾ ಎಂಬಾತನ ಅಸ್ಥಿಪಂಜರವನ್ನು ಕಳೆದ ಅಕ್ಟೋಬರ್‌ನಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ಡಿಸಿಪಿ ರಾಜೇಂದ್ರ ಸಿಂಗ್ ಸಾಗರ್ ಹೇಳಿದ್ದಾರೆ.

"ಮನೆಯೊಂದರ ಆವರಣ ಗೋಡೆಯನ್ನು ನವೀಕರಣಕ್ಕಾಗಿ ಒಡೆದಾಗ, ಮಣ್ಣಿನ ಅಡಿಯಲ್ಲಿ ಮಾನವ ಅಸ್ಥಿಪಂಜರ ಕಂಡುಬಂದಿದೆ ಎಂದು ಕಾರ್ಮಿಕರು ಹಾಗೂ ಮನೆಯ ಮಾಲಕ ದೂರು ನೀಡಿದ್ದರು. ಪೊಲೀಸ್ ತಂಡ ನೋಡಿದಾಗ ಹಸಿರು ಅಂಗಿಯ ಹೊದಿಕೆಯಿದ್ದ ಅಸ್ಥಿಪಂಜರ ಸಿಕ್ಕಿತ್ತು" ಎಂದು ಅವರು ವಿವರಿಸಿದರು.

2015ರಲ್ಲಿ ಮನೆ ಮಾಲಕ ಬಿಜಯ್‌ಗೆ ಈ ಮನೆಯನ್ನು ಬಾಡಿಗೆಗೆ ನೀಡಿದ್ದ. ಬಿಜಯ್ ತನ್ನ ಅಳಿಯನ ಜತೆ ಅಲ್ಲಿ ವಾಸವಿದ್ದ ಎನ್ನುವ ಅಂಶ ತನಿಖೆಯಿಂದ ತಿಳಿದುಬಂದಿತ್ತು. 2016ರ ಫೆಬ್ರವರಿಯಲ್ಲಿ ಬಿಜಯ್ ಮನೆಯ ಮಾಲಕನಿಗೆ, ಅಳಿಯ ತನ್ನ ಸ್ನೇಹಿತರ ಜತೆ ಹೋದವನು ಬಂದಿಲ್ಲ. ಈ ಬಗ್ಗೆ ದೂರು ದಾಖಲಿಸಿದ್ದಾಗಿ ಹೇಳಿದ. ಇದೇ ವೇಳೆ ಮನೆಯ ಆವರಣದಲ್ಲಿ ಕೆಲ ಗಿಡಗಳನ್ನು ನೆಡಲು ಅನುಮತಿ ಕೋರಿದ್ದ. ಈ ಅವಧಿಯಲ್ಲಿ ಮೃತದೇಹವನ್ನು ಹೂತುಹಾಕಿ ಮೇಲೆ ಗಿಡ ನೆಟ್ಟಿದ್ದಾನೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.

ಇದಾಗ ಎರಡು ತಿಂಗಳ ಬಳಿಕ ಆತ ಮನೆ ಬಿಟ್ಟಿದ್ದ. ಆದ್ದರಿಂದ ಬಿಜಯ್‌ನ ಪತ್ತೆ ಸಾಧ್ಯವಾಗಿರಲಿಲ್ಲ. ಆತನ ಕುಟುಂಬದವರಿಗೂ ಆತನ ಚಲನವಲನ ಬಗ್ಗೆ ಮಾಹಿತಿ ಇರಲಿಲ್ಲ. ಕೆಲಸವನ್ನೂ ಬಿಟ್ಟ ಆತ ಎಲ್ಲ ಬ್ಯಾಂಕ್ ಖಾತೆಗಳಿಂದ ಹಣ ವಾಪಸ್ ಪಡೆದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News