ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಪುರಾವೆಯಿಲ್ಲದಿದ್ದರೂ ವಜಾಗೊಳಿಸಿದ್ದೇಕೆ?

Update: 2019-01-11 08:42 GMT

ಹೊಸದಿಲ್ಲಿ, ಜ.11: ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ನಿರ್ದೇಶಕರಾಗಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದ ಅಲೋಕ್ ವರ್ಮಾ ಅವರನ್ನು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಆ ಹುದ್ದೆಯಿಂದ ವಜಾಗೊಳಿಸಿರುವುದು ವಿವಾದ ಸೃಷ್ಟಿಸಿದೆ. ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಯಾವುದೇ ಪುರಾವೆಯಿಲ್ಲದೇ ಇದ್ದರೂ ಅವರನ್ನು ಸಿಬಿಐ ಮುಖ್ಯಸ್ಥ ಹುದ್ದೆಯಿಂದ ಏಕೆ ಕೆಳಗಿಳಿಸಲಾಯಿತೆಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಒಂದು ಸೂಕ್ಷ್ಮ ಸಂಸ್ಥೆಯ ಮುಖ್ಯಸ್ಥರಾಗಿ ವರ್ಮಾ ಅವರಿಂದ ನಿರೀಕ್ಷಿಸಲ್ಪಟ್ಟ ಪ್ರಾಮಾಣಿಕತೆಯಿಂದ ಅವರು ಕಾರ್ಯನಿರ್ವಹಿಸಿಲ್ಲ ಎಂದು ಸಮಿತಿ ತೀರ್ಮಾನಿಸಿತ್ತು.

ವರ್ಮಾ ವಿರುದ್ಧದ ಪ್ರಕರಣಗಳಲ್ಲಿ ವಿಸ್ತೃತ ತನಿಖೆ ಅಗತ್ಯವಿರುವುದರಿಂದ ಅವರು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಯಲು ಸಾಧ್ಯವಿಲ್ಲ ಹಾಗೂ ಅವರನ್ನು ವರ್ಗಾಯಿಸಬೇಕೆಂದು ಸಮಿತಿ ಅಭಿಪ್ರಾಯಪಟ್ಟಿತ್ತು.

ಅವರನ್ನು ವಜಾಗೊಳಿಸಿದ ಸಮಿತಿಯಲ್ಲಿ ಪ್ರಧಾನಿ ಹೊರತಾಗಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಂದ ನೇಮಿತರಾದ ಹಿರಿಯ ನ್ಯಾಯಾಧೀಶ ಜಸ್ಟಿಸ್ ಎ.ಕೆ. ಸಿಕ್ರಿ ಇದ್ದರು.

ವರ್ಮಾ ವಿರುದ್ಧದ ಆರೋಪಗಳ ಕುರಿತಂತೆ ಕೇಂದ್ರ ಜಾಗೃತ ಆಯೋಗದ ವರದಿಯನ್ನು ಸಮಿತಿ ತನ್ನ ತೀರ್ಮಾನ ಕೈಗೊಳ್ಳುವ ಮುನ್ನ ಪರಿಗಣಿಸಿತ್ತು. ಜಾಗೃತ ಆಯೋಗದ  ವರದಿಯಲ್ಲಿ ವರ್ಮಾ ವಿರುದ್ಧದ 10 ಆರೋಪಗಳ ಪೈಕಿ ಕೇವಲ ಮೂರು ಆರೋಪಗಳಿಗೆ ಮಾತ್ರ ಆಧಾರವಿತ್ತೆಂದು ಹೇಳಲಾಗಿತ್ತಲ್ಲದೆ ಆರು ಪ್ರಕರಣಗಳಲ್ಲಿ ಯಾವುದೇ ಆಧಾರಗಳಿರಲಿಲ್ಲ ಎಂಬ ಉಲ್ಲೇಖವಿತ್ತು. ಆಧಾರವಿದ್ದ ಪ್ರಕರಣಗಳಲ್ಲಿಯೂ ಅವುಗಳ ವಿಶ್ವಸನೀಯತೆ ಒಂದೇ ಮಟ್ಟದಲ್ಲಿರಲಿಲ್ಲ.

ವರ್ಮಾ ಅವರನ್ನು ವಜಾಗೊಳಿಸುವುದಕ್ಕೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮ್ಮತಿ ಸೂಚಿಸಿದ್ದರೂ ಪ್ರಧಾನಿ ಮತ್ತು ಸಿಖ್ರಿ ಅವರ ವಜಾಗೆ ಸಹಮತ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News