2021ರಲ್ಲಿ ಮಾನವ ಸಹಿತ ಗಗನಯಾನದ ಗುರಿ: ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್

Update: 2019-01-11 14:45 GMT

ಬೆಂಗಳೂರು, ಜ.11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಮೊಟ್ಟಮೊದಲ ಬಾರಿಗೆ 2021ರ ಡಿಸೆಂಬರ್‌ನಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಪ್ರಕಟಿಸಿದರು.

ಶುಕ್ರವಾರ ನಗರದ ಇಸ್ರೋ ಪ್ರಧಾನ ಕಚೇರಿ ಅಂತರಿಕ್ಷಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2020ರ ಡಿಸೆಂಬರ್‌ನಲ್ಲಿ ಮೊದಲ ಮಾನವ ರಹಿತ ಯಾನ, 2021ರ ಜುಲೈನಲ್ಲಿ ಮಾನವ ರಹಿತ ಎರಡನೆ ಯಾನ ಕೈಗೊಳ್ಳಲಿದೆ. ಈ ನೌಕೆಗಳ ಉಡಾವಣೆ ಯಶಸ್ವಿಯಾದ ಬಳಿಕ, ಡಿಸೆಂಬರ್‌ನಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳುವ ಗುರಿಯಿದೆ ಎಂದರು.

ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಗತ್ಯವಿರುವ ಸಿದ್ಧತೆ, ತರಬೇತಿ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನ ಕೇಂದ್ರವನ್ನು ಇಸ್ರೋ ಸ್ಥಾಪಿಸುತ್ತಿದೆ. ಈ ಕೇಂದ್ರದ ನಿರ್ದೇಶಕರಾಗಿ ಡಾ.ಉನ್ನಿಕೃಷ್ಣನ್ ನಾಯರ್, ಯೋಜನೆಯ ನಿರ್ದೇಶಕರಾಗಿ ಹಟ್ಟನ್‌ರನ್ನು ನೇಮಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಗಗನಯಾನಕ್ಕೆ 10 ಸಾವಿರ ಕೋಟಿ ರೂ.ಅಂದಾಜು ವೆಚ್ಚವಾಗುತ್ತದೆ. ಈ ಮೊತ್ತದಲ್ಲಿ ಶೇ.80ರಷ್ಟು ಕೈಗಾರಿಕೆಗಳಿಗೆ ಬಳಕೆಯಾಗುತ್ತದೆ. ಸುಮಾರು 20 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಗಗನಯಾನವು ಇಸ್ರೋ ಪಾಲಿಗೆ ಮಹತ್ವದ ತಿರುವಾಗಲಿದೆ. 7 ದಿನಗಳ ಕಾಲ ಗಗನಯಾನವನ್ನು ಮಾಲು ಉದ್ದೇಶಿಸಲಾಗಿದೆ ಎಂದು ಶಿವನ್ ತಿಳಿಸಿದರು.

ಬಾಹ್ಯಾಕಾಶಕ್ಕೆ ಮಹಿಳೆ ಸೇರಿದಂತೆ ಭಾರತೀಯರನ್ನೇ ಕಳುಹಿಸಲಾಗುವುದು. ವಿದೇಶಿಯರನ್ನು ಕಳುಹಿಸುತ್ತಿಲ್ಲ. ಯಾರಿಗೂ ಈ ಬಗ್ಗೆ ಸಂಶಯ ಬೇಡ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಷ್ಟೇ ಇಸ್ರೋ ಕೆಲಸವಲ್ಲ. ಬಾಹ್ಯಾಕಾಶದಲ್ಲಿ ನೆಲೆ ಸ್ಥಾಪನೆ ಮಾಡುವ ಗುರಿಯನ್ನು ಭಾರತ ಹೊಂದಿದೆ. ಅಲ್ಲದೆ, ಈ ಮಾನವ ಸಹಿತ ಗಗನಯಾನ ಇಸ್ರೋದ ಅನೇಕ ಚಟುವಟಿಕೆಗಳಿಗೆ ನಾಂದಿ ಹಾಡಲಿದೆ ಎಂದು ಅವರು ಹೇಳಿದರು.

ಎಪ್ರಿಲ್‌ನಲ್ಲಿ ಚಂದ್ರಯಾನ-2

ತಾಂತ್ರಿಕ ಕಾರಣಗಳಿಂದ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆಯನ್ನು ಎಪ್ರಿಲ್ ತಿಂಗಳಿನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಉಡಾವಣೆಗೂ ಮುನ್ನ ಕೆಲವು ಪರೀಕ್ಷೆಗಳನ್ನು ಮಾಡಬೇಕಾಗಿರುವುದರಿಂದ ಮಾ.25ರಂದು ನಿಗದಿಗೊಳಿಸಿದ್ದ ಕಾರ್ಯಾಚರಣೆಯನ್ನು ಎಪ್ರಿಲ್‌ಗೆ ಮುಂದೂಡಲಾಗಿದೆ ಎಂದು ಶಿವನ್ ತಿಳಿಸಿದರು. ಚಂದ್ರಯಾನ-2 ರಲ್ಲಿನ ರೋವರ್ ಚಂದ್ರನ ಮೇಲ್ಮೈ ವಾತಾವರಣವನ್ನು ಪರೀಕ್ಷೆ ಮಾಡಲಿದೆ. ಲ್ಯಾಂಡರ್ ಮತ್ತು ರೋವರ್ ಕಾರ್ಯಾವಧಿ 14 ದಿನಗಳಾಗಲಿದೆ. ಚಂದ್ರಯಾನದ ರೋವರ್ ಚಂದ್ರನಲ್ಲಿ 500 ಮೀಟರ್‌ನಷ್ಟು ಚಲಿಸುವ ರೀತಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇಸ್ರೋ ಟಿವಿ ಸ್ಥಾಪನೆ: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಇನ್ನು ಮೂರು-ನಾಲ್ಕು ತಿಂಗಳಲ್ಲಿ ಇಸ್ರೋ ಟಿವಿಯನ್ನು ಸ್ಥಾಪಿಸಲಾಗುವುದು. ಈಗಾಗಲೇ ಇಸ್ರೋ ಟಿವಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಂಡಿವೆ ಎಂದು ಶಿವನ್ ತಿಳಿಸಿದರು.

2019ರಲ್ಲಿ 32 ಪ್ರಮುಖ ಯೋಜನೆಗಳನ್ನು ಕಾರ್ಯಗತ ಮಾಡಿದ್ದೇವೆ. ಈ ವರ್ಷ ಮರು ಬಳಕೆಯ ರಾಕೇಟ್ ಪರೀಕ್ಷಾರ್ಥ ಉಡಾವಣೆ ಮಾಡಲಿದ್ದೇವೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಜಿಸ್ಯಾಟ್-20 ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದರಿಂದ 100ಜಿಬಿಪಿಎಸ್ ಇಂಟರ್ ನೆಟ್ ಸ್ಪೀಡ್ ಲಭ್ಯವಾಗಲಿದೆ ಎಂದು ಅವರು ಹೇಳಿದರು. ಇಸ್ರೋದಿಂದ ಅಂತರ್ ಗ್ರಹ ಗಗನಯಾನ ಯೋಜನೆ ಚಾಲನೆಯಲ್ಲಿದೆ. 2020ರ ಜನವರಿಯಲ್ಲಿ ಇಸ್ರೊ ಆದಿತ್ಯ ಎಲ್-1 ಯೋಜನೆ ಸಾಕಾರವಾಗಲಿದೆ. ಪ್ರಮುಖವಾಗಿ ಸೂರ್ಯ ಹಾಗೂ ಹಿಲಿಯೋಫಿಸಿಕ್ಸ್ ಕುರಿತು ಈ ನೌಕೆಯು ಅಧ್ಯಯನ ಮಾಡಲಿದೆ ಎಂದು ಶಿವನ್ ತಿಳಿಸಿದರು. ಕಳೆದ ಒಂದು ವರ್ಷದಲ್ಲಿ ಇಸ್ರೋ 17 ಯೋಜನೆಗಳಲ್ಲಿ 16 ಯಶಸ್ವಿಯಾಗಿದೆ. ಈ ವರ್ಷ 32 ಮಿಷನ್‌ಗಳನ್ನು ಕೈಗೆತ್ತಿಕೊಳ್ಳಲು ಸಿದ್ಧವಾಗಿದ್ದೇವೆ. ಇದರಲ್ಲಿ 14 ಲಾಂಚ್ ವೆಹಿಕಲ್ ಮಿಷನ್, 2 ಎಸ್‌ಎಸ್‌ಎಲ್ವಿ ಮಿಷನ್, 3 ಕಾರ್ಟೋ, 2 ಸೈನ್ಸ್, ಇನ್ಸ್ಯಾಟ್- 2 ಸೇರಿದಂತೆ ಇನ್ನಿತರ ಯೋಜನೆಗಳು ಇರಲಿವೆ ಎಂದು ಅವರು ಹೇಳಿದರು.

ಅಧ್ಯಯನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನೆರವಾಗುವ ರಾಕೇಟ್‌ಗಳನ್ನು ಕಡಿಮೆ ಖರ್ಚಿನಲ್ಲಿ ಉಡಾವಣೆ ಮಾಡುವ ಯೋಜನೆ ನಮ್ಮದಾಗಿದೆ. ಅಗತ್ಯ ತುರ್ತು ಸಂದರ್ಭದಲ್ಲಿ 72 ಗಂಟೆಗಳಲ್ಲಿ ರಾಕೆಟ್ ಮಾಸ್ಕ್‌ಗಳನ್ನು ಸಿದ್ಧಗೊಳಿಸಿ ಇಸ್ರೋ ಉಡಾವಣೆ ಮಾಡಲಿದೆ. ಈ ಯೋಜನೆಯು ಜುಲೈನಿಂದ ಆರಂಭವಾಗುತ್ತಿದ್ದು, ಇದಕ್ಕಾಗಿ 30 ಕೋಟಿ ರೂ.ವೆಚ್ಚವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮಲ್ಲೆ ಸಮುದ್ರದಲ್ಲಿ ನಾಪತ್ತೆಯಾಗಿರುವ ಎಳು ಮೀನುಗಾರರನ್ನು ಹುಡುಕಲು ನೆರವು ಕೋರಿ ಸರಕಾರದ ವತಿಯಿಂದ ಈವರೆಗೆ ನಮಗೆ ಯಾವುದೇ ಪತ್ರ ಬಂದಿರುವ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಸರಕಾರ ನೆರವು ಕೇಳಿದರೆ ನಾವು ಕೊಡಲು ಸಿದ್ಧವಿದ್ದೇವೆ.

-ಡಾ.ಕೆ.ಶಿವನ್, ಇಸ್ರೋ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News