ಮೋದಿ ಮುಖ್ಯಮಂತ್ರಿ ಆಗಿದ್ದ ಅವಧಿಯ 3 ಎನ್‌ಕೌಂಟರ್‌ಗಳು ನಕಲಿ

Update: 2019-01-12 03:46 GMT

ಹೊಸದಿಲ್ಲಿ, ಜ.12: ನ್ಯಾಯಮೂರ್ತಿ ಎಚ್.ಎಸ್.ಬೇಡಿ ನೇತೃತ್ವದ ನಿಗಾ ಪ್ರಾಧಿಕಾರದ ತನಿಖಾ ವರದಿಯನ್ನು ಬಹಿರಂಗಪಡಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಗುಜರಾತ್ ಸರ್ಕಾರ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2002ರಿಂದ 2007ರ ಅವಧಿಯಲ್ಲಿ ನಡೆದ 18 ಎನ್‌ಕೌಂಟರ್‌ಗಳ ಪೈಕಿ ಕೇವಲ ಮೂರು ಎನ್‌ಕೌಂಟರ್‌ಗಳಷ್ಟೇ ನಕಲಿ ಎಂದು ಆಯೋಗದ ವರದಿ ಸ್ಪಷ್ಟಪಡಿಸಿದೆ. ಇದಲ್ಲದೇ ತನ್ನ ವರದಿಯಲ್ಲಿ ಯಾವ ರಾಜಕಾರಣಿಗಳನ್ನೂ ಹೆಸರಿಸಿಲ್ಲ.

ಒಟ್ಟು 18 ಎನ್‌ಕೌಂಟರ್‌ಗಳ ಪೈಕಿ 15 ಎನ್‌ಕೌಂಟರ್‌ಗಳು ನೈಜ. ಆದ್ದರಿಂದ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು 221 ಪುಟಗಳ ಅಂತಿಮ ವರದಿಯಲ್ಲಿ ನ್ಯಾಯಮೂರ್ತಿ ಬೇಡಿ ಸ್ಪಷ್ಟಪಡಿಸಿದ್ದಾರೆ. ಆದರೆ ಮೂರು ಎನ್‌ಕೌಂಟರ್‌ಗಳು ನಕಲಿಯಾಗಿದ್ದು, ಈ ಸಂಬಂಧ ಒಂಬತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ನಿಗಾ ಪ್ರಾಧಿಕಾರ ಶಿಫಾರಸು ಮಾಡಿದೆ.

ಮೋದಿ ಅವಧಿಯಲ್ಲಿ ಹಲವು ನಕಲಿ ಎನ್‌ಕೌಂಟರ್‌ಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಾಧಿಕಾರದ ವರದಿ ಬಿಜೆಪಿ ನಾಯಕರು ನಿರಾಳವಾಗುವಂತೆ ಮಾಡಿದೆ. ಆದರೆ ನ್ಯಾಯಮೂರ್ತಿ ಬೇಡಿ ವರದಿ, 2002ರಲ್ಲಿ ನಡೆದ ಸಮೀರ್ ಖಾನ್ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ 2007ರಲ್ಲಿ ತೆಹಲ್ಕಾ ನಡೆಸಿದ ಕುಟುಕು ಕಾರ್ಯಾಚರಣೆಯನ್ನು ಉಲ್ಲೇಖಿಸಿದೆ. ಇದರಲ್ಲಿ ರಾಜ್ಯ ಸರ್ಕಾರದ ರಾಜಕಾರಣಿಗಳು ಹಾಗೂ ಆಡಳಿತಾತ್ಮಕ ಹುದ್ದೆಯ ಅಧಿಕಾರಿಗಳ ಪಾತ್ರದ ಬಗ್ಗೆ ಅಫಿಡವಿತ್ ಸಲ್ಲಿಕೆಯಾಗಿರುವುದನ್ನೂ ಉಲ್ಲೇಖಿಸಲಾಗಿದೆ.

ಅಹ್ಮದಾಬಾದ್‌ನಲ್ಲಿ ನಡೆದ ಖಾನ್ ಹತ್ಯೆಗೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್‌ಗಳಾದ ಕೆ.ಎಂ.ವಘೇಲಾ ಮತ್ತು ಟಿ.ಎ.ಬಾರೋಟ್ ವಿರುದ್ಧ ಕೊಲೆ ಪ್ರಕರಣದ ವಿಚಾರಣೆ ನಡೆಸುವಂತೆ ಶಿಫಾರಸು ಮಾಡಿದೆ. 2006ರ ಎಪ್ರಿಲ್ 13ರಂದು ನಡೆದ ಕಾಸಿಂ ಜಾಫರ್ ಎನ್‌ಕೌಂಟರ್ ಮತ್ತು 2005ರ ಅಕ್ಟೋಬರ್ 9ರಂದು ನಡೆದ ಹಾಜಿ ಇಸ್ಮಾಯೀಲ್ ಹತ್ಯೆ ಪ್ರಕರಣ ಕೂಡಾ ನಕಲಿ ಎನ್‌ಕೌಂಟರ್ ಎಂದು ಪ್ರಾಧಿಕಾರ ಹೆಸರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News