ಮೈತ್ರಿ ಯುಗ: ಇಲ್ಲಿದೆ ಉತ್ತರ ಪ್ರದೇಶ ರಾಜಕೀಯ ಲೆಕ್ಕಾಚಾರ

Update: 2019-01-12 04:00 GMT

ಲಕ್ನೋ, ಜ.12: ಉತ್ತರ ಪ್ರದೇಶದಲ್ಲಿ ಕಟ್ಟಾ ರಾಜಕೀಯ ವಿರೋಧಿಗಳಾದ ಎಸ್ಪಿ ಹಾಗೂ ಬಿಎಸ್ಪಿ 25 ವರ್ಷಗಳ ಬಳಿಕ ಮತ್ತೆ ಕೈಜೋಡಿಸಿವೆ. ಅಯೋಧ್ಯೆ ಚಳವಳಿ ಹಿನ್ನೆಲೆಯಲ್ಲಿ ಬಿಜೆಪಿಯ ನಾಗಾಲೋಟ ತಡೆಯಲು ಮುಲಾಯಂ ಸಿಂಗ್ ಯಾದವ್ ಹಾಗೂ ಕಾನ್ಶಿರಾಂ ಪಕ್ಷಗಳು ಅಂದು ಮೈತ್ರಿ ಮಾಡಿಕೊಂಡಿದ್ದವು. ಇದೀಗ ಮುಲಾಯಂ ಪುತ್ರ ಅಖಿಲೇಶ್ ಯಾದವ್ ಹಾಗೂ ದಲಿತ ಐಕಾನ್ ಮಾಯಾವತಿ ಒಂದಾಗಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಶಕೆಗೆ ನಾಂದಿ ಹಾಡುವ ಸಾಧ್ಯತೆ ಇದೆ.

2014ರ ಮತಗಳಿಕೆಯ ಆಧಾರದಲ್ಲಿ ಲೆಕ್ಕಾಚಾರ ಹಾಕಿದರೆ ಎಸ್ಪಿ- ಬಿಎಸ್ಪಿ ಮೈತ್ರಿ ಬಿಜೆಪಿ ಸ್ಥಾನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಿದೆ ಎನ್ನುವುದು ತಜ್ಞರ ಅಭಿಮತ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸೇರಿದರೆ ರಾಜಕೀಯ ವಾತಾವರಣ ಸಂಪೂರ್ಣ ಮೈತ್ರಿಕೂಟದ ಪರವಾಗಲಿದ್ದು, 80 ಸ್ಥಾನಗಳ ಪೈಕಿ ಮೂರನೇ ಎರಡರಷ್ಟು ಸ್ಥಾನಗಳು ಕೂಟದ ಪರವಾಗಲಿದೆ.

2014ರಲ್ಲಿ ಬಿಜೆಪಿ 71 ಸ್ಥಾನ ಗೆದ್ದರೆ, ಅದರ ಮಿತ್ರಪಕ್ಷವಾದ ಅಪ್ನಾದಳ 2 ಸ್ಥಾನ ಬಗಲಿಗೆ ಹಾಕಿಕೊಂಡಿತ್ತು. ಸಮಾಜವಾದಿ ಪಕ್ಷ ಐದು ಹಾಗೂ ಕಾಂಗ್ರೆಸ್ ಎರಡು ಸ್ಥಾನಗಳಿಗೆ ತೃಪ್ತಿಪಟ್ಟಿದ್ದವು. ಬಿಜೆಪಿ ಕೂಟ ಶೇಕಡ 43.63 ಮತ ಪಡೆದಿದ್ದರೆ, ಬಿಎಸ್ಪಿ- ಎಸ್ಪಿ ಮತಗಳಿಕೆ ಶೇಕಡ 42.12. ಆದರೆ ಸೂಕ್ಷ್ಮವಾಗಿ ಅಂಕಿಅಂಶ ಪರಿಶೀಲಿಸಿದಾಗ ಜತೆಯಾಗಿ ಈ ಪಕ್ಷಗಳು ಚುನಾವಣೆ ಎದುರಿಸಿದರೆ 41 ಸ್ಥಾನಗಳನ್ನು ಗೆಲ್ಲಬಹುದು ಎನ್ನುವುದು ಅಭಿಮತ. ಆರ್‌ಎಲ್‌ಡಿ ಇದರಲ್ಲಿ ಸೇರಿದರೆ ಕೂಟದ ಸದಸ್ಯಬಲ 42ಕ್ಕೇರಲಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಅಧಿಕಾರ ವಿರೋಧಿ ಅಲೆ ಇದ್ದುದರಿಂದ ಬಿಜೆಪಿ ಪರ ಮತ ಹೆಚ್ಚು ಚಲಾವಣೆಯಾಗಿತ್ತು. ಈ ಬಾರಿ ಪರಿಸ್ಥಿತಿ ಭಿನ್ನ ಎನ್ನುವುದು ರಾಜಕೀಯ ಪಂಡಿತರ ಅನಿಸಿಕೆ.

1993ರಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಕೂಟ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 176 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 177 ಸ್ಥಾನ ಪಡೆದಿತ್ತು. ಆದರೆ 1996 ಮತ್ತು 2017ರಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News