ಲೋಕಸಭಾ ಚುನಾವಣೆ: ಬಿಜೆಪಿಯನ್ನು ಎದುರಿಸಲು ಒಂದಾದ ಎಸ್ಪಿ-ಬಿಎಸ್ಪಿ

Update: 2019-01-12 14:16 GMT

ಲಕ್ನೋ, ಜ.12: ಬದ್ಧವೈರಿಗಳಾಗಿದ್ದು ಇದೀಗ ಮೈತ್ರಿ ಮಾಡಿಕೊಂಡಿರುವ ಉತ್ತರಪ್ರದೇಶದ ಪ್ರಮುಖ ರಾಜಕೀಯ ಮುಖಂಡರಾದ ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ) ಹಾಗೂ ಮಾಯಾವತಿ (ಬಹುಜನ ಸಮಾಜವಾದಿ ಪಕ್ಷ) ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ 50-50 ಸೀಟು ಹಂಚಿಕೆ ಸೂತ್ರಕ್ಕೆ ಸಮ್ಮತಿಸಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಭಯ ನಾಯಕರೂ ಸ್ಪಷ್ಟ ಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ ಬರೇಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ ಗೆ ಬಿಟ್ಟುಕೊಡಲು ಎರಡೂ ಪಕ್ಷಗಳು ಒಪ್ಪಿವೆ.

ಉ.ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಉಭಯ ಪಕ್ಷಗಳು ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. 2 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಹಾಗೂ 2 ಕ್ಷೇತ್ರಗಳನ್ನು ಇತರ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ಈ ಮೈತ್ರಿ ರಚಿಸಿಲ್ಲ. ಜನಸಾಮಾನ್ಯರ, ದಲಿತರ, ಮುಸ್ಲಿಮರ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಯ ರಕ್ಷಣೆಯೂ ಪ್ರಮುಖ ಆದ್ಯತೆಯಾಗಿದೆ. ಮುಂಬರುವ ಉ.ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಈ ಮೈತ್ರಿಕೂಟ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಎಸ್‌ಪಿ, ಬಿಎಸ್‌ಪಿ ಮೈತ್ರಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ನಿದ್ದೆಗೆಡಿಸಲಿದೆ. ದೇಶದಾದ್ಯಂತ ಕಾಂಗ್ರೆಸ್‌ ನಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದೇವೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ನಮಗೇನೂ ಲಾಭವಾಗದು ಎಂದು ಮಾಯಾವತಿ ತಿಳಿಸಿದ್ದಾರೆ. ಬಳಿಕ ಮಾತನಾಡಿದ ಅಖಿಲೇಶ್ ಯಾದವ್, ಮಾಯಾವತಿಯವರಿಗೆ ಅವಮಾನ ಮಾಡಿದರೆ ತನಗೇ ಮಾಡಿದಂತಾಗುತ್ತದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಪ್ರಧಾನ ಮಂತ್ರಿ ಹುದ್ದೆಗೆ ಮಾಯಾವತಿಯನ್ನು ಬೆಂಬಲಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, ನನ್ನ ಆಯ್ಕೆ ಯಾರು ಎಂಬುದು ನಿಮಗೆಲ್ಲಾ ತಿಳಿದಿದೆ. ಈ ಹಿಂದೆಯೂ ಉ.ಪ್ರದೇಶ ಪ್ರಧಾನ ಮಂತ್ರಿಗಳನ್ನು ದೇಶಕ್ಕೆ ನೀಡಿದೆ. ಈ ಪ್ರವೃತ್ತಿ ಮುಂದುವರಿದರೆ ಸಂತಸವಾಗುತ್ತದೆ. ಮುಂದಿನ ಪ್ರಧಾನಿ ಉತ್ತರಪ್ರದೇಶದವರು ಆಗಿರುತ್ತಾರೆ ಮತ್ತು ಹೊಸ ಪ್ರಧಾನಿಯನ್ನು ದೇಶ ಕಾಣಲಿದೆ ಎಂದು ಹೇಳಿದರು.

ಸುಮಾರು 25 ವರ್ಷದಿಂದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳ ಮಧ್ಯೆ ಬದ್ಧ ದ್ವೇಷವಿತ್ತು. ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ (1995ರಲ್ಲಿ) ಬಿಎಸ್‌ಪಿ ನೆರವಿನಿಂದ ಸಮಾಜವಾದಿ ಪಕ್ಷ ಉ.ಪ್ರದೇಶದಲ್ಲಿ ಸರಕಾರ ರಚಿಸಿತ್ತು. ಆದರೆ ಮಾಯಾವತಿ ಬೆಂಬಲ ವಾಪಾಸು ಪಡೆದ ಕಾರಣ ಸರಕಾರ ಪತನಗೊಂಡಿತ್ತು. ಇದಾದ ಬಳಿಕ ಸಮಾಜವಾದಿ ಪಕ್ಷದ ಕಾರ್ಯಕರ್ತರು ಲಕ್ನೊದ ಅತಿಥಿಗೃಹದಲ್ಲಿ ತಂಗಿದ್ದ ಮಾಯಾವತಿಯ ಮೇಲೆ ಹಲ್ಲೆ ನಡೆಸಿದ್ದರು ಎಂಬುದು ಬಿಎಸ್‌ಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಎಸ್‌ಪಿ - ಬಿಎಸ್‌ಪಿ ಮೈತ್ರಿಯನ್ನು ಹಲವು ವಿಪಕ್ಷಗಳು ಸ್ವಾಗತಿಸಿವೆ. ಬಿಹಾರ ಮತ್ತು ಉ.ಪ್ರದೇಶದಲ್ಲಿ ಬಿಜೆಪಿಯ ಸೋಲು ಇದೀಗ ದೃಢಪಟ್ಟಿದೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಚಿಕ್ಕಮ್ಮ -ಸೋದರಳಿಯ ಜೋಡಿ

ರಾಜಕೀಯ ವಲಯದಲ್ಲಿ ಅಖಿಲೇಶ್- ಮಾಯಾವತಿ ಜೋಡಿಯನ್ನು ಚಿಕ್ಕಮ್ಮ- ಸೋದರಳಿಯ ಜೋಡಿ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿದೆ. ಕಳೆದ ವರ್ಷ ಉ.ಪ್ರದೇಶದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಈ ಜೋಡಿಯ ತಂತ್ರಗಾರಿಕೆ ಎದುರು ಮಂಕಾಗಿದ್ದ ಬಿಜೆಪಿ ಸೋಲೊಪ್ಪಿಕೊಂಡಿತ್ತು. ಎಸ್‌ಪಿ ಮತ್ತು ಬಿಎಸ್‌ಪಿ ಜೊತೆಯಾದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂಬುದು ತಮಗೆ ಆ ದಿನವೇ ಮನವರಿಕೆಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಠೇವಣಿಯನ್ನೂ ಕಳೆದುಕೊಂಡಿದೆ ಎಂದು ಮಾಯಾವತಿ ಹೇಳಿದ್ದಾರೆ. 

 ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ: ಬಿಜೆಪಿ ಟೀಕೆ 

ಎಸ್‌ಪಿ-ಬಿಎಸ್‌ಪಿ ಮೈತ್ರಿಯ ಪ್ರಮುಖ ಉದ್ದೇಶ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಉತ್ತರಪ್ರದೇಶದ ಅಥವಾ ದೇಶದ ಒಳಿತಿಗಾಗಿ ಈ ಮೈತ್ರಿ ರಚನೆಯಾಗಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಸ್ವಂತ ಬಲದಲ್ಲಿ ಪ್ರಧಾನಿ ಮೋದಿಯೆದುರು ಹೋರಾಡಲು ಸಾಧ್ಯವಿಲ್ಲ ಎಂಬುದು ಉಭಯ ಪಕ್ಷಗಳಿಗೂ ತಿಳಿದಿದೆ. ಮೋದಿಯನ್ನು ವಿರೋಧಿಸುವ ಏಕೈಕ ಉದ್ದೇಶ ಇದರ ಹಿಂದಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಬದ್ಧ ವೈರಿಗಳಾಗಿದ್ದವರ ಈ ಮೈತ್ರಿಯಿಂದ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮವಾಗದು. ಚುನಾವಣೆ ಗಣಿತದ ಕುರಿತಲ್ಲ, ರಸಾಯನ ಶಾಸ್ತ್ರದ ಬಗ್ಗೆ ನಡೆಯುತ್ತದೆ ಎಂದವರು ಹೇಳಿದ್ದಾರೆ.    ಲಕ್ನೋ, ಜ.12: ಬದ್ಧವೈರಿಗಳಾಗಿದ್ದು ಇದೀಗ ಮೈತ್ರಿ ಮಾಡಿಕೊಂಡಿರುವ ಉತ್ತರಪ್ರದೇಶದ ಪ್ರಮುಖ ರಾಜಕೀಯ ಮುಖಂಡರಾದ ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ) ಹಾಗೂ ಮಾಯಾವತಿ (ಬಹುಜನ ಸಮಾಜವಾದಿ ಪಕ್ಷ) ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ 50-50 ಸೀಟು ಹಂಚಿಕೆ ಸೂತ್ರಕ್ಕೆ ಸಮ್ಮತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News