ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಿಗೆ ಆಸ್ಪತ್ರೆಯಲ್ಲೇ ಮದುವೆ ಮಾಡಿಸಿದ ಹೆತ್ತವರು!

Update: 2019-01-12 08:33 GMT

ಹೈದರಾಬಾದ್, ಜ.12: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಕರಾಬಾದ್ ಜಿಲ್ಲೆಯ ಯುವ ಜೋಡಿಯೊಂದರ ವಿವಾಹ ಅವರನ್ನು ದಾಖಲಿಸಲಾದ ಆಸ್ಪತ್ರೆಯಲ್ಲಿಯೇ ನಡೆದಿದೆ. ಕಳೆದ ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ತಮ್ಮನ್ನು ತಮ್ಮ ಕುಟುಂಬಗಳು ಪ್ರತ್ಯೇಕಿಸಬಹುದೆಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದರು.

ಯುವತಿ ರೇಷ್ಮಾಗೆ 19 ವರ್ಷ ವಯಸ್ಸಾಗಿದ್ದರೆ ಆಕೆಯ ಪ್ರಿಯಕರ ನವಾಝ್ ಗೆ 21 ವರ್ಷ. ರೇಷ್ಮಾಗೆ ಆಕೆಯ ಹೆತ್ತವರು ವರನನ್ನು ಹುಡುಕುತ್ತಿದ್ದರು. ಇನ್ನು ನವಾಝ್ ನನ್ನು ವಿವಾಹವಾಗಲು ಸಾಧ್ಯವಿಲ್ಲವೆಂದು ಭಯ ಪಟ್ಟ ಆಕೆ ಕೀಟನಾಶಕ ಸೇವಿಸಿದ್ದಳು. ಆಕೆಯ ಕುಟುಂಬ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತ್ತು.

ಪ್ರಿಯತಮೆ ಆತ್ಮಹತ್ಯೆ ಯತ್ನ ನಡೆಸಿದ್ದಾಳೆಂದು ತಿಳಿದು ಅಲ್ಲಿಗೆ ಧಾವಿಸಿದ ನವಾಝ್ ಅಲ್ಲಿಯೇ ಕೀಟನಾಶಕ ಸೇವಿಸಿದ್ದ. ಆತನನ್ನೂ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಈ ಪ್ರೇಮಿಗಳನ್ನು ದೂರವಾಗಿಸುವುದು ಅಸಾಧ್ಯವೆಂದು ಅರಿತ ಅವರ ಕುಟುಂಬಗಳು ಕೆಲವೇ ಗಂಟೆಗಳಲ್ಲಿ ಧರ್ಮಗುರುವನ್ನು ಆಸ್ಪತ್ರೆಗೆ ಕರೆಸಿ ಆಸ್ಪತ್ರೆಯಲ್ಲಿಯೇ ಯುವ ಜೋಡಿಯ ವಿವಾಹ ನೆರವೇರಿಸಿವೆ.

ಇಬ್ಬರನ್ನೂ ಆರಂಭದಲ್ಲಿ ವಿಕಾರಾಬಾದ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ನಂತರ ಅವರನ್ನು ಕ್ರಾಫರ್ಡ್ ಮಿಷನ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ರೇಶ್ಮಾಳ ಸ್ಥಿತಿ ಆರಂಭದಲ್ಲಿ ಗಂಭೀರವಾಗಿತ್ತು. ಆದರೆ ಈಗ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News