ಸಮೀರ್ ಖಾನ್, ಕಸಂ ಜಾಫರ್, ಇಸ್ಮಾಯೀಲ್ ಹತ್ಯೆಯ ಬಗ್ಗೆ ತನಿಖಾ ವರದಿ ಹೇಳಿದ್ದೇನು ?

Update: 2019-01-12 15:33 GMT

ಹೊಸದಿಲ್ಲಿ,ಜ.12: ಗುಜರಾತ್ ನಲ್ಲಿ 2002-2006ರ ನಡುವಿನ ಅವಧಿಯಲ್ಲಿ ನಡೆದ 17 ಪೊಲೀಸ್ ಎನ್‌ ಕೌಂಟರ್‌ಗಳ ಪೈಕಿ ಮೂರು ನಕಲಿಯಾಗಿದ್ದವು ಎಂದು ತನಿಖಾ ಸಮಿತಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂಭತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎಸ್.ಬೇಡಿ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.

ಸಮೀರ್ ಖಾನ್,ಕಸಂ ಜಾಫರ್ ಮತ್ತು ಹಾಜಿ ಹಾಜಿ ಇಸ್ಮಾಯೀಲ್ ಅವರನ್ನು ಕಸ್ಟಡಿಯಲ್ಲಿ ಹತ್ಯೆ ಮಾಡಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಸಮಿತಿಯು 229 ಪುಟಗಳ ತನ್ನ ಅಂತಿಮ ವರದಿಯಲ್ಲಿ ಹೇಳಿದೆ.

ಸಮಿತಿಯು ಈ ಪ್ರಕರಣಗಳಲ್ಲಿ ಯಾವುದೇ ಐಪಿಎಸ್ ಅಧಿಕಾರಿಯನ್ನು ಹೆಸರಿಸಿಲ್ಲ.

17 ಎನ್‌ಕೌಂಟರ್ ಪ್ರಕರಣಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯವು ನ್ಯಾ.ಬೇಡಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಕಳೆದ ವರ್ಷದ ಫೆಬ್ರವರಿಯಲ್ಲಿ ತನ್ನ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಸಮಿತಿಯ ಅಂತಿಮ ವರದಿಯನ್ನು ಗೌಪ್ಯವಾಗಿರಿಸುವಂತೆ ಕೋರಿ ಗುಜರಾತ್ ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ಜ.9ರಂದು ತಿರಸ್ಕರಿಸಿದ್ದ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ವರದಿಯ ಪ್ರತಿಗಳನ್ನು ಕವಿ ಜಾವೇದ್ ಅಖ್ತರ್ ಸೇರಿದಂತೆ ದೂರುದಾರರಿಗೆ ನೀಡುವಂತೆ ಆದೇಶಿಸಿತ್ತು.

ಈ ಪ್ರಕರಣಗಳಲ್ಲಿ ಸ್ವತಂತ್ರ ಸಂಸ್ಥೆ ಅಥವಾ ಸಿಬಿಐನಿಂದ ತನಿಖೆಗೆ ಕೋರಿ ಅಖ್ತರ್ ಮತ್ತು ಹಿರಿಯ ಪತ್ರಕರ್ತ ಬಿ.ಜಿ.ವರ್ಗೀಸ್ ಅವರು 2007ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವರ್ಗೀಸ್ 2014ರಲ್ಲಿ ನಿಧನರಾಗಿದ್ದಾರೆ.

ಸಮೀರ್ ಖಾನ್ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಕೆ.ಎಂ.ವೇಲಾ ಮತ್ತು ಟಿ.ಎ.ಬಾರೋತ್ ಅವರ ವಿರುದ್ಧ ಕೊಲೆ ಮತ್ತು ಸಂಬಂಧಿತ ಅಪರಾಧಗಳಿಗಾಗಿ ಕಾನೂನು ಕ್ರಮ ಜರುಗಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.

► ಸಮೀರ್ ಖಾನ್ ಪ್ರಕರಣ

ಪೊಲೀಸರ ಹೇಳಿಕೆಯಂತೆ ಮೇ,1996ರಲ್ಲಿ ಖಾನ್ ತನ್ನ ಸೋದರ ಸಂಬಂಧಿಯೊಂದಿಗೆ ಸೇರಿಕೊಂಡು ಪೊಲೀಸ್ ಕಾನ್‌ಸ್ಟೇಬಲ್ ಓರ್ವನನ್ನು ಚೂರಿಯಿಂದ ಇರಿದಿದ್ದು,ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಸೋದರ ಸಂಬಂಧಿಯನ್ನು ಬಂಧಿಸಲಾಗಿದ್ದರೆ ಖಾನ್ ಪರಾರಿಯಾಗಿದ್ದ. ಆತ ಬಳಿಕ ಪಾಕಿಸ್ತಾನಕ್ಕೆ ತೆರಳಿ ಜೈಷೆ ಮುಹಮ್ಮದ್(ಜೆಇಎಂ) ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದುಕೊಂಡು ನೇಪಾಳದ ಮೂಲಕ ಭಾರತಕ್ಕೆ ಮರಳಿದ್ದ.

ಪೊಲೀಸರು ಹೇಳುವಂತೆ 2002ರ ಅಕ್ಷರಧಾಮ ದಾಳಿಯ ಬಳಿಕ ಜೆಇಎಂ ಉಗ್ರನೋರ್ವ ಅಹ್ಮದಾಬಾದ್‌

ಗೆ ತೆರಳುವಂತೆ ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವಂತೆ ಖಾನ್‌

ಗೆ ನಿರ್ದೇಶ ನೀಡಿದ್ದ ಎಂದು ವರದಿಯು ತಿಳಿಸಿದೆ. ದೇಶದ ವಿರುದ್ಧ ಯುದ್ಧ ಸಾರಿದ್ದ ಆರೋಪದಲ್ಲಿ ಖಾನ್‌ನನ್ನು ಬಂಧಿಸಿದ್ದ ಪೊಲೀಸರು ಆತ 1996ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಚೂರಿಯಿಂದ ಇರಿದಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಆತ ವೇಲಾರ ರಿವಾಲ್ವರ್ ಕಿತ್ತುಕೊಂಡು ಅವರತ್ತ ಗುಂಡು ಹಾರಿಸಿ ಪಲಾಯನಗೈದಿದ್ದ. ಇತರ ಇಬ್ಬರು ಇನ್ಸ್‌ಪೆಕ್ಟರ್‌ಗಳಾದ ಬಾರೋತ್ ಮತ್ತು ಎ.ಎ.ಚೌಹಾಣ್(ಈಗ ದಿವಂಗತ) ಅವರು ಖಾನ್ ಮೇಲೆ ಗುಂಡುಗಳನ್ನು ಹಾರಿಸಿದ್ದರು ಮತ್ತು ಆತ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿಕೊಂಡಿದ್ದರು.

ಆದರೆ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿ ಖಾನ್‌ನನ್ನು ಕೊಂದಿದ್ದರು ಎನ್ನುವುದನ್ನು ಸಮಿತಿಯು ಕಂಡುಕೊಂಡಿದೆ.

ವೈದ್ಯಕೀಯ ಮತ್ತು ಇತರ ವರದಿಗಳನ್ನು ಉಲ್ಲೇಖಿಸಿರುವ ಸಮಿತಿಯು,ಪೊಲೀಸ್ ಅಧಿಕಾರಿಗಳು ಖಾನ್‌ಗೆ ಅತಿ ಸಮೀಪದಲ್ಲಿದ್ದರು ಮತ್ತು ಬಹುಶಃ ಆತ ನೆಲದಲ್ಲಿ ಕುಳಿತುಕೊಂಡು ಪ್ರಾಣಭಿಕ್ಷೆಯನ್ನು ಬೇಡುತ್ತಿದ್ದ ಎಂದು ಹೇಳಿದೆ.

ಇನ್‌ಸ್ಪೆಕ್ಟರ್ ಚೌಹಾಣ್ ನಿಧನರಾಗಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಸಾಧ್ಯವಿಲ್ಲ ಎಂದಿರುವ ಸಮಿತಿಯು,ಖಾನ್ ಕುಟುಂಬಕ್ಕೆ 10 ಲ.ರೂ.ಗಳ ಪರಿಹಾರವನ್ನು ಮಂಜೂರು ಮಾಡಿದೆ.

► ಕಸಂ ಜಾಫರ್ ಪ್ರಕರಣ

ಜಾಫರ್ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನುವುದನ್ನು ಸಾಬೀತುಗೊಳಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಸಮಿತಿಯು ಕಂಡುಕೊಂಡಿದೆ. 2006,ಎ.13ರಂದು ಜಾಫರ್ ಮತ್ತು ಇತರ 17 ಜನರನ್ನು ಅಹ್ಮದಾಬಾದ್‌ನ ಹೋಟೆಲ್‌ವೊಂದರಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,ಮರುದಿನ ಸೇತುವೆಯೊಂದರ ಕೆಳಗೆ ಆತನ ಶವ ಪತ್ತೆಯಾಗಿತ್ತು. ಈ ಹತ್ಯೆಯಲ್ಲಿ ಎಸ್‌ಐ ಜೆ.ಎಂ.ಭರ್ವಾದ್ ಮತ್ತು ಕಾನಸ್ಟೇಬಲ್ ಗಣೇಶಭಾಯಿ ಭಾಗಿಯಾಗಿದ್ದರು ಎಂದು ಹೇಳಿರುವ ಸಮಿತಿಯು ಅವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ. ಸಮಿತಿಯು ತನ್ನ 2013,ನ.21ರ ಆದೇಶದಲ್ಲಿ ಜಾಫರ್ ಕುಟುಂಬಕ್ಕೆ 14 ಲ.ರೂ.ಗಳ ಪರಿಹಾರವನ್ನೂ ನೀಡಿತ್ತು.

► ಹಾಜಿ ಹಾಜಿ ಇಸ್ಮಾಯೀಲ್ ಪ್ರಕರಣ

2005ರಲ್ಲಿ ನಡೆದಿದ್ದ,ಭೂಗತ ಪಾತಕಿ ದಾವೂದ್ ಇಬ್ರಾಹೀಂನ ನಿಕಟವರ್ತಿಯೆನ್ನಲಾದ ಕಳ್ಳ ಸಾಗಣೆೆದಾರ ಇಸ್ಮಾಯೀಲ್ ಹತ್ಯೆಯ ಕುರಿತು ಪೊಲೀಸರ ಹೇಳಿಕೆಯನ್ನೂ ಸಮಿತಿಯು ಪ್ರಶ್ನಿಸಿದೆ. ಪೊಲೀಸರ ಹೇಳಿಕೆಯಂತೆ ಇಸ್ಮಾಯೀಲ್ ಪೊಲೀಸರತ್ತ ಗುಂಡುಗಳನ್ನು ಹಾರಿಸಿದ್ದ ಮತ್ತು ಪ್ರತಿದಾಳಿಯಲ್ಲಿ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಮರಣೋತ್ತರ ಪರೀಕ್ಷಾ ವರದಿಯನ್ನು ಗಮನಕ್ಕೆ ತೆಗೆದುಕೊಂಡಿರುವ ಸಮಿತಿಯು,ಇಸ್ಮಾಯೀಲ್‌ನ ಮೇಲೆ ಅತ್ಯಂತ ಸಮೀಪದಿಂದ ಗುಂಡುಗಳನ್ನು ಹಾರಿಸಿದ್ದನ್ನು ವರದಿಯು ದೃಢಪಡಿಸಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News