ಶೋಷಿತರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು: ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

Update: 2019-01-13 13:02 GMT

ಬೆಂಗಳೂರು, ಜ.13: ಶೋಷಿತ ಸಮುದಾಯದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ದೊರೆಯುವಂತೆ ಆಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂದಿಲ್ಲಿ ತಿಳಿಸಿದರು.

ಇಲ್ಲಿನ ಆರ್‌ಟಿ ನಗರ ಮುಖ್ಯರಸ್ತೆಯ ತರಳಬಾಳು ಕೇಂದ್ರದಲ್ಲಿ ಕಬೀರ್ ಟ್ರಸ್ಟ್ ಆಯೋಜಿಸಿದ್ದ, 33ನೆ ವಾರ್ಷಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಉಪನ್ಯಾಸ ಮಾಲೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಕುಟುಂಬದ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯುವುದು ಇಂದಿನ ಕಾಲ ಘಟ್ಟದಲ್ಲಿ ಕನಸಿನ ಮಾತಾಗಿದೆ. ಹೀಗಾಗಿ, ಸರಕಾರ, ಸಂಘ-ಸಂಸ್ಥೆಗಳು ಈ ವರ್ಗದ ಮಕ್ಕಳನ್ನು ಪ್ರಮುಖವಾಗಿ ಗುರುತಿಸಿ, ಗುಣಮಟ್ಟದ ಶಿಕ್ಷಣ ಒದಗಿಸುವ ಕಾಯಕದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.

ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಅದರಲ್ಲಿ ಮುಖ್ಯ ಯುವ ಶಕ್ತಿಯೇ ಸಂಪತ್ತು. ಇವರಿಗೆ ಒಳ್ಳೆಯ ಶಿಕ್ಷಣ ಒದಗಿಸಿದರೆ, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲಿದ್ದಾರೆ. ಹೀಗಾಗಿ, ಪ್ರತಿಯೊಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ನಿಲ್ಲಬೇಕು ಎಂದು ಅವರು ತಿಳಿಸಿದರು.

ಒಳ್ಳೆಯ ಕೆಲಸ: ಇದೇ ಜನವರಿಗೆ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಇದರ ನಡುವೆ, ರಾಜ್ಯದ ಪ್ರತಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಸರಕಾರವು ಸ್ಥಾಪಿಸಿರುವ ಎಸ್ಸಿ-ಎಸ್ಟಿ ಮತ್ತು ಅಲ್ಪ ಸಂಖ್ಯಾತ, ಹಿಂದುಳಿದ ಸಮುದಾಯದವರ ಹಾಸ್ಟಲ್‌ಗಳು ಉನ್ನತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೋಷಿತರ ಶಿಕ್ಷಣ ಶ್ರಮಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

20 ಲಕ್ಷ: ಶಾಸಕ ಬಿ.ಎಸ್.ಸುರೇಶ್ ಮಾತನಾಡಿ, ಕಬೀರ್ ಟ್ರಸ್ಟ್ ಎಲ್ಲ ಧರ್ಮಿಯರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದುಡಿಯುತ್ತಿದೆ. ಇನ್ನೂ, ಟ್ರಸ್ಟ್ ಕಟ್ಟಡ ನಿರ್ಮಾಣ ಕಾಮಗಾರಿ ಬಾಕಿಯಿದ್ದು, ಮುಂದಿನ ಕಾರ್ಯಗಳಿಗೆ ಶಾಸಕರ ನಿಧಿಯಿಂದ 20 ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.

ಟಸ್ಟ್ ಅಧ್ಯಕ್ಷ ಟಿ.ಪ್ರಭಾಕರ್ ಮಾತನಾಡಿ, 1963ನೆ ಸಾಲಿನಲ್ಲಿ ನಾನು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾಗಿದ್ದೆ. ಆಗ ಗಾಂಧಿ ಬಜಾರ್‌ನಲ್ಲಿ ಅಣ್ಣಯ್ಯ ಎಂಬುವವರು ಯುವಕ ಸಂಘದ ಮೂಲಕ ಉಚಿತ ತರಗತಿಗಳನ್ನು ಏರ್ಪಡಿಸುತ್ತಿದ್ದರು. ನಾನು ಆ ತರಗತಿಗಳ ಪ್ರಯೋಜನ ಪಡೆದಿದ್ದೆ ಎಂದು ಹೇಳಿದರು.

ಹೀಗಾಗಿ, ನನಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಆಲೋಚನೆ ಬಂತು. 1986 ರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಉಚಿತ ತರಗತಿಗಳನ್ನು ಆಯೋಜಿಸಿದೆ. ಆರಂಭದಲ್ಲಿ 50 ವಿದ್ಯಾರ್ಥಿಗಳಿದ್ದರು. ಈಗ ನೂರಾರು ಮಕ್ಕಳು ತರಗತಿಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಚಾಲಕರಾದ ಭೀಮಯ್ಯ, ಪ್ರಕಾಶ್, ಕೈಲಾಶ್, ಜಯಸಿಂಹ ಸೇರಿದಂತೆ ಪ್ರಮುಖರಿದ್ದರು.

‘ಕಡಿಮೆ ಅಂಕ ಬಂದರೆ, ಲೋಕಾಯುಕ್ತರಾಗಿ’

ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಬಂದ ಕಾರಣ, ನನ್ನ ಪೋಷಕರು ಕಾನೂನು ಶಾಲೆಗೆ ಸೇರಿಸಿ, ಲೋಕಾಯುಕ್ತ ಮಾಡಿದರು. ಹೀಗಾಗಿ, ನೀವು ಸಹ ಕಡಿಮೆ ಅಂಕ ಗಳಿಸಿದರೆ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ನನ್ನಂತೆ ಲೋಕಾಯುಕ್ತ ನ್ಯಾಯಮೂರ್ತಿ ಆಗಬಹುದು ಎಂದು ಲೋಕಾಯುಕ್ತ ವಿಶ್ವನಾಥ ಶೆಟ್ಟಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News