ಒಂದೇ ಹಂತದಲ್ಲಿ 46 ಸಾವಿರ ಕೋಟಿ ರೂ. ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ

Update: 2019-01-13 13:52 GMT

ಬೆಂಗಳೂರು, ಜ.13: ರೈತರ ಸಾಲಮನ್ನಾಕ್ಕೆ ಮೈತ್ರಿ ಸರಕಾರ ಬದ್ಧವಾಗಿದ್ದು, ಫೆ.8ರಂದು ಮಂಡಿಸಲಿರುವ ಎರಡನೆ ಬಜೆಟ್‌ನಲ್ಲಿ ರೈತರ 46 ಸಾವಿರ ಕೋಟಿ ರೂ.ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ಹಣ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ರವಿವಾರ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿರುವ ಅವರು, ರೈತರ ಸಾಲಮನ್ನಾ ಕುರಿತು 2018ರ ಆಗಸ್ಟ್ 8ರಂದು ನಡೆದ ಸಂಪುಟ ಸಭೆಯಲ್ಲಿ ನಾಲ್ಕು ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿತ್ತು. ಸಾಲ ಮನ್ನಾ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿ ನಾಯಕರಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಒಂದೇ ಹಂತದಲ್ಲಿ ರೈತರ ಸಾಲಮನ್ನಾ ಮಾಡಲು ಮೈತ್ರಿ ಸರಕಾರ ನಿರ್ಧರಿಸಿದೆ. ಚುನಾಯಿತ ಸರಕಾರವು ಮನಸ್ಸು ಮಾಡಿದರೆ, ಹಣಕಾಸು ಶಿಸ್ತನ್ನು ಉಲ್ಲಂಘಿಸದೆ ನಿಯೋಜಿತ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರಕಾರ 70 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಘೋಷಿಸಿತ್ತು. ಆದರೆ, ಈ ಹಣ ತಲುಪಲು ಎಷ್ಟು ಸಮಯ ಹಿಡಿದಿದೆ ಎಂಬುದನ್ನು ಪರಿಶೀಲಿಸಬಹುದು. ನನಗಿಂತಲೂ ಮೊದಲು ಅಧಿಕಾರಕ್ಕೆ ಬಂದಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಸಾಲ ಮನ್ನಾ ಘೋಷಣೆ ಮಾಡಿದ್ದವು. ಆದರೆ, ಈ ಯೋಜನೆಗಾಗಿ ಈಗಾಗಲೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದರು.

ರಾಷ್ಟ್ರಿಕೃತ ಬ್ಯಾಂಕ್‌ಗಳೊಂದಿಗೆ ಸರಕಾರವು ಚರ್ಚೆಯಲ್ಲಿದ್ದು, ಒಂದೇ ಬಾರಿಗೆ ಸಾಲ ತೀರಿಸುವ ಯೋಜನೆ ಇರುವುದರಿಂದ ಬ್ಯಾಂಕ್‌ಗಳಿಂದ ರಿಯಾಯಿತಿ ನಿರೀಕ್ಷಿಸಲಾಗುತ್ತಿದೆ. ಸರಕಾರಿ ಬ್ಯಾಂಕ್‌ಗಳಿಂದ ರೈತರ ಸಾಲದ ಮೊತ್ತ 9,500 ಕೋಟಿ ರೂ.ಎಂಬುದು ಸರಕಾರಕ್ಕೆ ದೊರೆತಿರುವ ಮಾಹಿತಿ. ಆದರೆ, ಇವುಗಳಲ್ಲಿ ಕೆಲವು ನಕಲಿ ಅರ್ಜಿಗಳೂ ಸೇರಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News