ಮಾಜಿ ಸೈನಿಕರು ಒಗ್ಗಟ್ಟಿನಿಂದ ಸರಕಾರದ ಸೌಲಭ್ಯ ಪಡೆದುಕೊಳ್ಳಲಿ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2019-01-13 13:59 GMT

ಬೆಂಗಳೂರು, ಜ.13: ಮಾಜಿ ಸೈನಿಕರು ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ತಿಳಿಸಿದರು.

ರವಿವಾರ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕೆಆರ್‌ಐ ಸಭಾಂಗಣದಲ್ಲಿ ಮಾಜಿ ಸೈನಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಸೌಲಭ್ಯಗಳು ಸೈನಿಕರು ಪಡೆದುಕೊಳ್ಳಬೇಕಾದರೆ ಒಗ್ಗಟ್ಟು ಬಹಳ ಮುಖ್ಯವಾಗುತ್ತದೆ. ಒಗ್ಗಟ್ಟು ಒಂದಿದ್ದರೆ ಸರಕಾರದ ಕೆಲಸಗಳು ತಾನಾಗಿಯೆ ಆಗುತ್ತದೆ ಎಂದು ಅಭಿಪ್ರಾಯಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ನಂತರ ಲೋಕಾಯುಕ್ತ ರಾಗಿ ಅಧಿಕಾರ ವಹಿಸಿಕೊಂಡಾಗ ಇಷ್ಟೆಲ್ಲ ಸಮಸ್ಯೆಗಳಿವೆಯೆ ಎಂದು ಅಚ್ಚರಿಯಾಯಿತು. ರಾಜಕೀಯ ಹಾಗೂ ಅಧಿಕಾರ ಮಟ್ಟದಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿರುವುದು ಕಂಡುಬಂತು ಎಂದು ಅವರು ಹೇಳಿದರು.

ಬಾಗಲಕೋಟೆಯ ಅಂಗವಿಕಲ ಮಗುವಿಗೆ ಚಿಕಿತ್ಸೆ ನೀಡಲು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಲಂಚ ಕೇಳಿದ್ದರು. ಇದು ಲೋಕಾಯುಕ್ತರ ಮುಂದೆ ಬಂದಾಗ ನಾನೆ ಖುದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದೆ ಎಂದು ಅವರು ನೆನಪು ಮಾಡಿಕೊಂಡರು.

ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೆ.ಮತಾಯ್ ಮಾತನಾಡಿ, ಮಾಜಿ ಸೈನಿಕರೊಬ್ಬರಾದ ಆನಂದ್ ಎಂಬುವವರು 1ಎಕರೆ 20ಗುಂಟೆ ಜಮೀನನ್ನು ಉಳಿಸಿಕೊಳ್ಳಲು ನಡೆಸಿದ ಶತಪ್ರಯತ್ನಗಳ ಬಗ್ಗೆ ವಿವರಿಸಿದರು. ದಕ್ಷಿಣ ಕನ್ನಡದ ಮಾಜಿ ಸೈನಿಕರು ತಮ್ಮ ಸಂಘದ ಕಚೇರಿಗಾಗಿ 30ಗುಂಟೆ ಸ್ಥಳವನ್ನು ಉಳಿಸಿಕೊಳ್ಳಲು 30 ವರ್ಷ ಹೋರಾಟ ನಡೆಸಿದ್ದರು. ಸೈನಿಕರು ಎದುರಿಸುತ್ತಿರುವ ಇಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಈ ಸಂಘಕ್ಕೆ ಮನವಿ ಸಲ್ಲಿಸಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News