ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಅಪಾಯಕಾರಿ: ಶರದ್ ಪವಾರ್

Update: 2019-01-13 14:20 GMT

ಮುಂಬೈ, ಜ.13: ತಜ್ಞರ ಪ್ರಕಾರ, ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವುದು ಸಂವಿಧಾನದ ಮೂಲ ಸಿದ್ಧಾಂತಗಳಿಗೆ ಅಪಾಯಕಾರಿಯಾಗಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಗೆ ಶನಿವಾರ ಸಂಸತ್ತು ಅಂಗೀಕಾರ ನೀಡಿದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತಿಮ ಕ್ಷಣದಲ್ಲಿ ಮೋದಿ ಸರಕಾರ ಶೇ.10 ಮೀಸಲಾತಿ ನಿರ್ಧಾರಕ್ಕೆ ಬಂದಿದೆ ಎಂದು ಪವಾರ್ ಹೇಳಿದರು. ಮೀಸಲಾತಿಯ ಕುರಿತ ತನ್ನ ನಿಲುವನ್ನು ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಮೀಸಲಾತಿ ಶೇ.50ರ ಮಿತಿ ಮೀರಬಾರದು ಎಂದು ಸುಪ್ರೀಂ ತಿಳಿಸಿದೆ. ಇದೀಗ ಜನರ ಮನಸ್ಥಿತಿಯನ್ನು ಅರಿತ ಮೋದಿ ಸರಕಾರ ಕೆಲವೊಂದು ನಿರ್ಧಾರಗಳನ್ನು ಆತುರದಿಂದ ಕೈಗೊಳ್ಳುತ್ತಿದೆ. ಆದರೆ ಅಧಿಕಾರದಲ್ಲಿದ್ದ ನಾಲ್ಕೂವರೆ ವರ್ಷದ ಬಳಿಕ ಇಂತಹ ನಿರ್ಧಾರ ಕೈಗೊಂಡಿರುವ ಹಿಂದಿರುವ ಉದ್ದೇಶವನ್ನು ಜನತೆ ಅರಿತಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಠಾಕ್ರೆ’ ಮುಂತಾದ ರಾಜಕೀಯ ಸಿನೆಮಗಳು ಮತದಾರರ ಮೇಲೆ ಯಾವುದೇ ಪ್ರಭಾವ ಬೀರದು. ಇಂತಹ ಸಿನೆಮಗಳನ್ನು ನೋಡಿ ಮತದಾರ ಅಭಿಪ್ರಾಯ ಬದಲಾಯಿಸುತ್ತಾನೆ ಎಂದು ತನಗನಿಸುವುದಿಲ್ಲ ಎಂದು ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News