ಖಾಸಗಿ ಉದ್ದಿಮೆಗಳಲ್ಲಿ 169 ಲೈಂಗಿಕ ಕಿರುಕುಳ ಪ್ರಕರಣ ದಾಖಲು: ಸರಕಾರ

Update: 2019-01-13 14:23 GMT

ಹೊಸದಿಲ್ಲಿ, ಜ.13: 2017ರಿಂದ ಖಾಸಗಿ ಉದ್ದಿಮೆಗಳ ಕೆಲಸದ ಸ್ಥಳದಲ್ಲಿ 169 ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದರೆ ಆ ಕುರಿತು ದೂರು ದಾಖಲಿಸಲು ‘ಶಿ ಬಾಕ್ಸ್’ ಎಂಬ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. 2017ರಿಂದ ‘ಶಿ ಬಾಕ್ಸ್’ನಲ್ಲಿ 169 ದೂರು ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ 33 ಪ್ರಕರಣ (ಅತ್ಯಧಿಕ), ದಿಲ್ಲಿಯಲ್ಲಿ 23 ಪ್ರಕರಣ ನಡೆದಿದೆ. ಕೇಂದ್ರ ಸಚಿವಾಲಯಗಳು ಲೈಂಗಿಕ ಕಿರುಕುಳ ಕುರಿತ 141 ದೂರುಗಳನ್ನು ಸ್ವೀಕರಿಸಿದ್ದು ಇದರಲ್ಲಿ 45 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ .

ವಿತ್ತ ಸಚಿವಾಲಯದಲ್ಲಿ ಅತ್ಯಧಿಕ, ಅಂದರೆ 21, ಸಂಪರ್ಕ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದಲ್ಲಿ ತಲಾ 16 ಪ್ರಕರಣ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಲು ಇರುವ ‘ಶಿ-ಬಾಕ್ಸ್’ ವ್ಯವಸ್ಥೆಯನ್ನು ಎಲ್ಲಾ ಕೇಂದ್ರ ಸಚಿವಾಲಯ, ಇಲಾಖೆಗಳು, ದೇಶದಾದ್ಯಂತದ 653 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವೆಬ್‌ಸೈಟ್‌ಗೆ ಜೋಡಿಸಲಾಗಿದೆ. ‘ಶಿ-ಬಾಕ್ಸ್’ ನಲ್ಲಿ ಪಡೆಯುವ ದೂರುಗಳ ಸಕಾಲಿಕ ವಿಲೇವಾರಿಯ ಉದ್ದೇಶದಿಂದ ಈ ದೂರುಗಳು ನೇರವಾಗಿ ಸಂಬಂಧಿತ ಅಧಿಕಾರಿ(ಕ್ರಮ ಕೈಗೊಳ್ಳಲು ಅಧಿಕಾರ ಇರುವ)ಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ತ್ವರಿತ ವಿಲೇವಾರಿಗೆ ಪೂರಕವಾಗಿ ದೂರುದಾರರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ‘ಶಿ-ಬಾಕ್ಸ್’ನಲ್ಲಿ ಇರುವ ದೂರುಗಳನ್ನು ಮೇಲ್ವಿಚಾರಣೆ ನಡೆಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News