ಮೀಸಲಾತಿ ಕಾನೂನು ಜಾತಿಯಾಧಾರಿತ ಕೋಟಾವನ್ನು ತೆಗೆಯಲು ಬಿಜೆಪಿಯ ಅಜೆಂಡಾ:ಜಿಗ್ನೇಶ್ ಮೇವಾನಿ

Update: 2019-01-13 15:26 GMT

ಕೋಲ್ಕತಾ,ಜ.13: ಮೇಲ್ಜಾತಿಗಳ ಬಡವರಿಗೆ ಶೇ.10 ಕೋಟಾ ಒದಗಿಸುವ ಕೇಂದ್ರದ ಕ್ರಮವು ವ್ಯವಸ್ಥೆಯಿಂದ ಜಾತಿಯಾಧಾರಿತ ಮೀಸಲಾತಿಗಳನ್ನು ತೆಗೆದುಹಾಕುವ ಆರೆಸ್ಸೆಸ್‌ನ ಅಜೆಂಡಾವನ್ನು ಸಾಕಾರಗೊಳಿಸುವತ್ತ ಹೆಜ್ಜೆಯಾಗಿದೆ ಎಂದು ಗುಜರಾತಿನ ಪಕ್ಷೇತರ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ರವಿವಾರ ಇಲ್ಲಿ ಹೇಳಿದರು.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎನ್ನುವುದು ತನ್ನ ಹಾಗೂ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಜನರ ಆತಂಕವಾಗಿದೆ ಎಂದು ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೇವಾನಿ ನುಡಿದರು.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಪ್ರಾತಿನಿಧ್ಯ ನೀಡಲು ಈ ದೇಶದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಗಿತ್ತು. ಬಡತನ ನಿವಾರಣೆ ಅದರ ಉದ್ದೇಶವಾಗಿರಲಿಲ್ಲ ಎಂದ ಅವರು,ಇತರ ಸಮುದಾಯಗಳ ಬಡಜನರು ಯಾವುದೇ ಲಾಭವನ್ನು ಪಡೆದುಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ ಮೀಸಲಾತಿಯ ಉದ್ದೇಶ ಬಡತನ ನಿವಾರಣೆಯಲ್ಲ. ಸಮಾಜದಲ್ಲಿನ ಜಾತಿ ವ್ಯವಸ್ಥೆಯಿಂದಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಎಸ್‌ಸಿ/ಎಸ್‌ಟಿ/ಒಬಿಸಿ ಜನರಿಗೆ ಪ್ರಾತಿನಿಧ್ಯವನ್ನು ಒದಗಿಸುವುದು ಅದರ ಉದ್ದೇಶವಾಗಿದೆ ಎಂದರು.

ಉತ್ತರ ಪ್ರದೇಶದಲಿ ಬಿಜೆಪಿ ವಿರುದ್ಧ ಬಿಎಸ್‌ಪಿ-ಎಸ್‌ಪಿ ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿದ್ದಕ್ಕಾಗಿ ಮಾಯಾವತಿ ಮತ್ತು ಅಖಿಲೇಶ ಯಾದವ ಅವರನು ಅಭಿನಂದಿಸಿದ ಅವರು,ಇತರ ಪ್ರತಿಪಕ್ಷಗಳು ಇದರಿಂದ ಸ್ಫೂರ್ತಿಯನ್ನು ಪಡೆದುಕೊಳ್ಳಬೇಕು ಮತ್ತು ಬಿಜೆಪಿ ವಿರೋಧಿ ಮತಗಳ ಗರಿಷ್ಠ ಧ್ರುವೀಕರಣಕ್ಕೆ ಪ್ರಯತ್ನಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News