ಅನ್ಯಭಾಷಾ ಭವನಕ್ಕೆ ಇಲ್ಲದ ಜಾಗದ ಕೊರತೆ, ಕನ್ನಡ ಭವನಕ್ಕೆ ಇದೆ: ಪ್ರೊ.ಚಂದ್ರಶೇಖರ ಪಾಟೀಲ

Update: 2019-01-13 15:39 GMT

ಬೆಂಗಳೂರು, ಜ.13: ಬೆಂಗಳೂರಿನಲ್ಲಿ ಅನ್ಯ ಭಾಷಿಗರಾದ ಗುಜರಾತಿ, ರಾಜಸ್ಥಾನಿ, ಮಲೆಯಾಳಿ, ತೆಲಗು ಸೇರಿ ಎಲ್ಲ ಭಾಷೆಗಳ ಭವನ ನಿರ್ಮಿಸಲು ಜಾಗದ ಕೊರತೆಯಾಗಿಲ್ಲ. ಆದರೆ, ಕನ್ನಡ ಭವನಕ್ಕೆ ಜಾಗದ ಕೊರತೆ ಇದೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಜಿಲ್ಲಾ ಸಾಹಿತ್ಯ ಕನ್ನಡ ಭವನ ನಿರ್ಮಿಸಲು ಅಡ್ಡಗಾಲು ಹಾಕುತ್ತಿರುವುದನ್ನು ಖಂಡಿಸಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕರ್ತರು ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಪಕ್ಕದಲ್ಲಿ ಗುರುತಿಸಿರುವ ಜಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಅವರು ಮಾತನಾಡಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು 36 ವರ್ಷ ಕಳೆದಿದೆ. ಹಲವು ವರ್ಷದಿಂದ ಸ್ವಂತ ಕಟ್ಟಡಕ್ಕಾಗಿ ಪರಿಷತ್ತಿನ ಕಾರ್ಯಕರ್ತರು ಹೋರಾಟ ನಡೆಸಿದ್ದರೂ ಪ್ರತಿಫಲ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಅನ್ಯ ಭಾಷೆಗಳ ಭವನ ನಿರ್ಮಿಸಲು ಜಾಗದ ಕೊರತೆಯಾಗಿಲ್ಲ. ಆದರೆ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಿಲ್ಲಾ ಸಾಹಿತ್ಯ ಕನ್ನಡ ಭವನ’ ನಿರ್ಮಾಣಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಕರ್ನಾಟಕದಲ್ಲಿ ಮಾತ್ರ ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆಯ ಬೇಕಾಗುತ್ತದೆ. ಕರ್ನಾಟದಲ್ಲಿ ಹೋರಾಟದ ಅನಿವಾರ್ಯತೆ ಇದೆ. ಗೋಕಾಕ್ ಚಳವಳಿ ಹಾಗೂ ಮತ್ತಿತರರ ಹೋರಾಟದ ಮೂಲಕ ಸಾಕಷ್ಟು ಕಾರ್ಯಗಳು ಯಶಸ್ವಿಯಾಗಿವೆ. ಈ ವಿಷಯದಲ್ಲೂ ಹೋರಾಟ ಅನಿವಾರ್ಯ ಎಂದರು.

ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ಆರ್.ವಿ. ದೇವರಾಜ್, ಸಂಸದ ಪಿ.ಸಿ.ಮೋಹನ್, ಶಾಸಕ ಉದಯ್ ಬಿ.ಗರುಡಚಾರ್ ಸೇರಿ ವಿವಿಧ ರಾಜಕೀಯ ನಾಯಕರು ಬಿಬಿಎಂಪಿ ಆಯುಕ್ತರಿಗೆ ಜಿಲ್ಲಾ ಸಾಹಿತ್ಯ ಕನ್ನಡ ಭವನ ನಿರ್ಮಿಸಲು ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. ಅದರೂ ಪ್ರಯೋಜನವಾಗಿಲ್ಲ. ಯಾರೇ ಅಡ್ಡಗಾಲು ಹಾಕುತ್ತಿದ್ದರೂ ಕನ್ನಡ ಭವನ ನಿರ್ಮಿಸಿಯೇ ತಿರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿಮರ್ಶಕ ಡಾ.ಭೈರಮಂಗಲ ರಾಮೇಗೌಡ, ಲೇಖಕ ಜಾಣಗೆರೆ ವೆಂಕಟರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News