ಫೆಬ್ರವರಿ ಮೊದಲ ವಾರ ಬಜೆಟ್‌ ಮಂಡನೆ: ಡಾ.ಜಿ.ಪರಮೇಶ್ವರ್

Update: 2019-01-14 07:46 GMT

ಬೆಂಗಳೂರು, ಜ.14: 2019-20ನೇ ಸಾಲಿನ ಆಯವ್ಯಯ ಮಂಡನೆ ಸಂಬಂಧ ಎಲ್ಲ ಕಾಂಗ್ರೆಸ್‌ ಸಚಿವರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಇಲಾಖಾವಾರು ಚರ್ಚೆ ನಡೆಸಲಾಯಿತು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಇಂದು ಅಶೋಕ್ ಹೋಟೆಲ್‌ನಲ್ಲಿ ಕರೆದಿದ್ದ ಕಾಂಗ್ರೆಸ್‌ನ ಎಲ್ಲ‌ ಸಚಿವರುಗಳ ಸಭೆ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.

ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್‌ ಮಂಡನೆ ಮಾಡಲು‌ ಹಣಕಾಸು ಸಚಿವರಾದ ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಹೀಗಾಗಿ ಇಲಾಖಾವಾರು ಚರ್ಚಿಸಲು ಎಲ್ಲ ಸಚಿವರನ್ನು ಇಂದು ಸಭೆಗೆ ಆಹ್ವಾನಿಸಿದ್ದೆ.

ಸಮ್ಮಿಶ್ರ ಸರಕಾರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವು ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಹೊರಡಿಸಲಾಗಿದೆ. ಅಂತೆಯೇ ಈ ಎರಡೂ ಪ್ರಣಾಳಿಕೆಯಲ್ಲಿರುವ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಈಗಾಗಲೇ ನಿರ್ಧರಿಸಲಾಗಿತ್ತು.‌ ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದ ಆಯವ್ಯಯದಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.

ಈ ಬಜೆಟ್‌ನಲ್ಲಿ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿ, ಇನ್ನೂ ಜಾರಿಗೆ ಬಾರದ ಕಾರ್ಯಕ್ರಮಗಳನ್ನು ಸಹ ಅನುಷ್ಠಾನ ಮಾಡಲಾಗುತ್ತದೆ.

ಸಾಲಮನ್ನಾ ಘೊಷಿಸಿರುವುದರಿಂದ ಅದಕ್ಕೆ ಇಂತಿಷ್ಠು ಹಣ ಮೀಸಲಿರಿಸಿ, ಇತರ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ನೀಡುವಂತೆಯೂ ಇಲಾಖಾವಾರು ಸಚಿವರುಗಳಿಗೆ ಸೂಚನೆ ನೀಡಲಾಗಿದೆ ಎಂದರು.‌ಇಂದು ಚರ್ಚಿಸಿದ ಅಂಶಗಳನ್ನು ಹಾಗೂ ಸಚಿವರುಗಳ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವ ಕೆಲಸವನ್ನು ನಾನು ಮಾಡಲಿದ್ದೇನೆ ಎಂದರು.

ಸಭೆಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ,  ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಿ.ಕೆ. ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News