​ಕುಂಭ ಮೇಳ ಆರಂಭ: 1.2 ಕೋಟಿ ಭಕ್ತರಿಂದ ರಾಜ ಸ್ನಾನ

Update: 2019-01-15 04:15 GMT

ಅಲಹಾಬಾದ್, ಜ. 15: ಪವಿತ್ರ ಸಂಗಮದಲ್ಲಿ ಭಕ್ತರು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಶಾಹಿ ಸ್ನಾನ್ (ರಾಜ ಸ್ನಾನ) ಕೈಗೊಳ್ಳುವ ಮೂಲಕ 2019ರ ಕುಂಭ ಮೇಳ ಆರಂಭವಾಗಿದೆ.

ಮಂಗಳವಾರ ಮುಂಜಾನೆ 13 ಅಖಾರಾ ಸಾಧುಗಳು ಪವಿತ್ರ ಸ್ನಾನ ಮಾಡಿದರು. ಗಂಗಾ- ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ 12 ದಶಲಕ್ಷ ಭಕ್ತರು ಪವಿತ್ರ ಸ್ನಾನ ಕೈಗೊಂಡಿದ್ದಾರೆ ಎಂಧು ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಹೇಳಿದೆ.

ಏಳು ವಾರಗಳ ಈ ಮೇಳದ ವೇಳೆ ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡುವುದರಿಂದ ದೇಹ ಹಾಗೂ ಆತ್ಮ ಶುದ್ಧಿಯಾಗುತ್ತದೆ. ಜತೆಗೆ ಹುಟ್ಟು- ಸಾವಿನ ಸಂಕೋಲೆಯಿಂದ ಮುಕ್ತಿ ದೊರೆಯುತ್ತದೆ ಎನ್ನುವುದು ಹಿಂದೂ ಸಂಪ್ರದಾಯದ ನಂಬಿಕೆ.

2019ರ ಚುನಾವಣೆಗೆ ಮುನ್ನ ಕುಂಭಮೇಳವನ್ನು ಯಶಸ್ವಿಯಾಗಿ ನಿಭಾಯಿಸಿ ಜನರಿಂದ ಶಹಬಾಸ್‌ಗಿರಿ ಪಡೆಯಲು ಕಸರತ್ತು ನಡೆಸಿರುವ ಆದಿತ್ಯನಾಥ್ ಆಡಳಿತಕ್ಕೆ ಆರಂಭದಲ್ಲೇ ಆತಂಕ ಎದುರಾಗಿದ್ದು, ಸೋಮವಾರ ಸಂಜೆ ಸೆಕ್ಟರ್ 16ರ ದಿಗಂಬರ ಅನಿ ಅಖಾರಾದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ತಕ್ಷಣ ಅಧಿಕಾರಿಗಳು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ, ಆರು ಟೆಂಟ್‌ಗಳು ಹಾಗೂ ಕೆಲ ಸಲಕರಣೆಗಳು ಭಸ್ಮವಾಗಿವೆ. ಎರಡು ವಾಹನಗಳು ಸುಟ್ಟು ಹೋಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿತ್ತು.

ಅಡುಗೆ ಮಾಡುವಾಗ ಎಲ್‌ಪಿಜಿ ಸೋರಿಕೆಯಾದದ್ದು ಹಾಗೂ ಸಿಲಿಂಡರ್ ಸ್ಫೋಟಗೊಂಡದ್ದು ಬೆಂಕಿ ಆಕಸ್ಮಿಕಕ್ಕೆ ಕಾರಣ ಎಂದು ಅಖಾರಾ ಭದ್ರತಾ ವಿಭಾಗದ ಎಸ್ಪಿ ಅಶುತೋಷ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಒಳಗೆ ಸಿಕ್ಕಿಹಾಕಿಕೊಂಡಿದ್ದ ನಾಲ್ವರು ಸಂತರನ್ನು ರಕ್ಷಿಸಲಾಗಿದೆ.

ಈ ಬಾರಿಯ ಕುಂಭಮೇಳದಲ್ಲಿ ಒಟ್ಟು 1.5 ಕೋಟಿ ಮಂದಿ ಭಾಗವಹಿಸುವ ನಿರೀಕೆ ಇದ್ದು, 3200 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ ನಡೆಯುವ ಈ ಭವ್ಯ ಉತ್ಸವ ಮಾರ್ಚ್ 4ರಂದು ಅಂದರೆ ಮಹಾಶಿವರಾತ್ರಿಯಂದು ಸಮಾಪನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News