ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಇಬ್ಬರು ಶಾಸಕರು

Update: 2019-01-15 13:13 GMT

ಬೆಂಗಳೂರು, ಜ.15: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿ ತೆರೆಮರೆಯ ಕಸರತ್ತು ಯಶಸ್ವಿಯಾಗಿದ್ದು, ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್‌ರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದಿದೆ.

ಕಳೆದ ಒಂದು ವಾರದಿಂದ ಬಿಜೆಪಿ ನಾಯಕರು ಮುಂಬೈಯಲ್ಲಿ ಪಕ್ಷೇತರ ಶಾಸಕರನ್ನು ಹಿಡಿದಿಟ್ಟುಕೊಂಡು ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಆಡಳಿತ-ಪ್ರತಿಪಕ್ಷ ನಾಯಕರ ನಡುವೆ ಆರೋಪ, ಪ್ರತ್ಯಾರೋಪಗಳು ಕುತೂಹಲಕ್ಕೆ ಕಾರಣವಾಗಿದೆ. ಮುಂಬೈಯಲ್ಲಿ ಸುದ್ದಿಗೋಷ್ಟಿ ನಡೆಸಿರುವ ರಾಣಿಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್, ಮೈತ್ರಿ ಸರಕಾರದಲ್ಲಿ ಸಚಿವನಾಗಿ ಉತ್ತಮ ಕೆಲಸ ಮಾಡುತ್ತಿದ್ದೆ. ಇನ್ನು ಬಹಳಷ್ಟು ಕೆಲಸ ಮಾಡುವ ಇಚ್ಛೆ ಇತ್ತು. ಆದರೆ, ಮೈತ್ರಿ ಸರಕಾರದಿಂದ ನನಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದೇನೆಂದು ತಿಳಿಸಿದರು.

ಮುಳಬಾಗಿಲು ಕ್ಷೇತ್ರದ ಶಾಸಕ ಎಚ್.ನಾಗೇಶ್ ಮಾತನಾಡಿ, ಮೈತ್ರಿ ಸರಕಾರದಲ್ಲಿ ಶಾಸಕರಿಗೆ ಯಾವುದೆ ಮಾನ್ಯತೆ ಇಲ್ಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಸ್ಥಿರ ಸರಕಾರ ಸ್ಥಾಪಿಸುವ ಹಿನ್ನೆಲೆಯಲ್ಲಿ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದು, ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆಂದು ಹೇಳಿದರು.

ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಕೊಡುತ್ತಿದ್ದಂತೆ, ಆಪರೇಷನ್ ಕಮಲಕ್ಕೆ ಮತ್ತಷ್ಟು ಚುರುಕುಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈಗಾಗಲೆ ಬಿಜೆಪಿ ಎಲ್ಲ ಶಾಸಕರು ನಗರದ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದು, ಒಂದು ವಾರಗಳ ಕಾಲ ಬಿಜೆಪಿ ವರಿಷ್ಠರ ಕಣ್ಗಾವಲಿನಲ್ಲಿ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿಜೆಪಿಯ ಕಾರ್ಯತಂತ್ರಗಳಿಗೆ ಪ್ರತಿ ತಂತ್ರಗಳನ್ನು ರೂಪಿಸಲು ಕಾಂಗ್ರೆಸ್-ಜೆಡಿಎಸ್ ಸಿದ್ಧಗೊಂಡಿದೆ. ಮೊದಲ ಹಂತವಾಗಿ ಕಾಂಗ್ರೆಸ್‌ನ ಬಿನ್ನಮತೀಯ ಶಾಸಕರ ಮನವೊಲಿಸಿ, ಯಾವುದೆ ಕಾರಣಕ್ಕೂ ಬಿಜೆಪಿಯ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವಂತಹ ಜವಾಬ್ದಾರಿಯನ್ನು ಹಿರಿಯ ಸಚಿವರಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News