ಮೈತ್ರಿ ಸರಕಾರ ಕಲ್ಲುಬಂಡೆಯಂತೆ ಸುಭದ್ರವಾಗಿದೆ: ಸಿಎಂ ಕುಮಾರಸ್ವಾಮಿ

Update: 2019-01-15 14:05 GMT

ಬೆಂಗಳೂರು, ಜ.15: ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಮಾತ್ರಕ್ಕೆ ಸರಕಾರಕ್ಕಿರುವ ಸಂಖ್ಯಾಬಲ ಕಡಿಮೆಯಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಕಲ್ಲುಬಂಡೆಯಂತೆ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದೇವೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ನಗರದ ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಅವರು, ಮೈತ್ರಿ ಸರಕಾರದ ಮುಂದಿನ ನಡೆಯ ಕುರಿತು ಸುದೀರ್ಘ ಮಾತುಕತೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಾಡುತ್ತಿರುವ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಅಗತ್ಯವಿಲ್ಲ. ಬಿಜೆಪಿಯ ಯಾವುದೇ ತಂತ್ರವೂ ಫಲಿಸುವುದಿಲ್ಲ. ಈ ಬಗ್ಗೆ ರಾಜ್ಯದ ಜನತೆ ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರು.

ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರೂ ಅವರಲ್ಲಿ ಸಂಖ್ಯಾಬಲವಿಲ್ಲ. ಯಾವುದೆ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿ ಆಮಿಷಗಳಿಗೆ ಬಲಿಯಾಗುವುದಿಲ್ಲ. ಕಳೆದ ಒಂದು ವಾರದಿಂದ ಬಿಜೆಪಿ ನಾಯಕರು ನಡೆಸುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಗಮನಿಸುತ್ತಾ ಎಂಜಾಯ್ ಮಾಡುತ್ತಿದ್ದೇನೆಂದು ಅವರು ವ್ಯಂಗ್ಯವಾಡಿದರು.

ರೆಸಾರ್ಟ್ ರಾಜಕೀಯ ಶುರು

ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿ ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದೆ. ಈಗಾಗಲೆ ಇಬ್ಬರು ಪಕ್ಷೇತರರನ್ನು ತನ್ನತ್ತ ಸೆಳೆದುಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು, ತಮ್ಮ ಪಕ್ಷಗಳ ಶಾಸಕರನ್ನು ಕೆಲವು ದಿನಗಳ ಮಟ್ಟಿಗಾದರೂ ಜೋಪಾನವಾಗಿ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್‌ನ ಎಲ್ಲ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಕಾಂಗ್ರೆಸ್‌ನ ಭಿನ್ನಮತೀಯ ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಎಚ್ಚರಿಕೆಯಿಂದ ಕಾಯುವಂತಹ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಹಾಗೂ ಝಮೀರ್ ಅಹ್ಮದ್‌ಖಾನ್‌ಗೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News