ಮೆಟ್ರೋ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರಂ ಸ್ಕ್ರೀನ್‌ಡೋರ್ ಅಳವಡಿಕೆ

Update: 2019-01-15 15:54 GMT

ಬೆಂಗಳೂರು, ಜ.15: ಮೇಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಿಎಂಆರ್‌ಸಿಎಲ್ ಸಮಾಲೋಚನೆ ನಡೆಸುತ್ತಿದ್ದು, ಶೀಘ್ರವೇ ಪ್ಲಾಟ್‌ಫಾರಂ ಸ್ಕ್ರೀನ್‌ಡೋರ್ (ಪಿಎಸ್‌ಡಿ) ವ್ಯವಸ್ಥೆ ಅಳವಡಿಸಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ಮಾಹಿತಿ ನೀಡಿದ್ದಾರೆ.

ಪ್ಲಾಟ್‌ಫಾರಂನ ನೆಲದಿಂದ ಚಾವಣಿವರೆಗೆ ಸಂಪೂರ್ಣ ಅಡ್ಡಗೋಡೆ ನಿರ್ಮಿಸಿ ರೈಲು ಬಂದು ನಿಂತಾಗ ಮಾತ್ರ ಬಾಗಿಲು ತೆರೆಯುವಂತಹ ವ್ಯವಸ್ಥೆಯೇ ಪಿಎಸ್‌ಡಿ ವ್ಯವಸ್ಥೆಯಾಗಿದ್ದು, ಪ್ಲಾಟ್‌ಫಾರಂನ ಬಾಗಿಲು ಮುಚ್ಚದ ಹೊರತು ರೈಲು ಮುಂದಕ್ಕೆ ಚಲಿಸುವುದಿಲ್ಲ. ಹೀಗಾಗಿ ಯಾವುದೇ ವ್ಯಕ್ತಿ ಹಳಿಗೆ ಬೀಳುವ ಸಾಧ್ಯತೆ ಇರುವುದಿಲ್ಲ.

ಪ್ರಯಾಣಿಕರು ಹಳಿಯ ಮೇಳೆ ಬೀಳುವುದನ್ನು ತಡೆಯಲು ಪ್ಲಾಟ್‌ಫಾರಂನ ಎಡ್ಜ್ ಡೋರ್ (ಪಿಇಡಿ) ವ್ಯವಸ್ಥೆಯನ್ನೂ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ. ಪಿಇಡಿ ವ್ಯವಸ್ಥೆಯಲ್ಲಿ ನೆಲದಿಂದ ಚಾವಣಿವರೆಗೆ ಅಡ್ಡಗೋಡೆ ನಿರ್ಮಿಸುವ ಬದಲು ಅರ್ಧದವರೆಗೆ ಮಾತ್ರ ತಡೆಗೋಡೆ ನಿರ್ಮಿಸಲಾಗುತ್ತದೆ. ಪಿಎಸ್‌ಡಿಗೆ ಹೋಲಿಸಿದರೆ ಇವುಗಳ ಅಳವಡಿಕೆಗೆ ಸುಲಭವಾಗಿದೆ.

ಅಲ್ಲದೆ, ಎಲ್ಲ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಅಳವಡಿಸಬಹುದು. ಆದರೆ, ಪ್ಲಾಟ್‌ಫಾರಂಗಳಲ್ಲಿ ಸದ್ಯ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರ ದಟ್ಟಣೆ ಇಲ್ಲ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಲ್ಲಾ ನಿಲ್ದಾಣಗಳಲ್ಲೂ ಪಿಎಸ್‌ಡಿ ವ್ಯವಸ್ಥೆ ಅಳವಡಿಸುತ್ತೇವೆ ಎಂದು ಚೌಹಾಣ್ ತಿಳಿಸಿದರು. ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ ನಿರ್ಮಾಣವಾಗುವ ಸುರಂಗ ಮಾರ್ಗದ 12 ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಸಲಿದ್ದೇವೆ. ಈ ವ್ಯವಸ್ಥೆ ಅಳವಡಿಸಿದರೆ ಪ್ರಯಾಣಿಕರು ಹಳಿಗೆ ಬೀಳುವುದಕ್ಕೆ ಅವಕಾಶವೇ ಇರುವುದಿಲ್ಲ. ಈ ವ್ಯವಸ್ಥೆ ಅಳವಡಿಕೆಯಿಂದ ಈ ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಗೆ ಬಳಕೆಯಾಗುವ ವಿದ್ಯುತ್ ಉಳಿತಾಯವೂ ಆಗುತ್ತದೆ. ಜತೆಗೆ ಸುರಕ್ಷತೆಯೂ ಹೆಚ್ಚುತ್ತದೆ. ಹಾಗಾಗಿ ಇದರಿಂದ ದೂರಗಾಮಿ ಪ್ರಯೋಜನವಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News