ಎನ್‌ಕೌಂಟರ್ ಮಾಡಲು ಸಿಸಿಬಿ ಸಿದ್ಧತೆ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ್ದ ರೌಡಿಶೀಟರ್ ಅರ್ಜಿ ವಜಾ

Update: 2019-01-15 15:59 GMT

ಬೆಂಗಳೂರು, ಜ.15: ತನ್ನನ್ನು ಸಿಸಿಬಿ ಪೊಲೀಸರು ಎನ್‌ಕೌಂಟರ್ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ರೌಡಿ ಶೀಟರ್ ಜೆ.ವಿ.ಜಾರ್ಜ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಚಾಮರಾಜಪೇಟೆ ಠಾಣೆಯ ರೌಡಿ ಶೀಟರ್ ಜೆ.ವಿ.ಜಾರ್ಜ್(35) ವಿರುದ್ಧ ನಾನಾ ಠಾಣೆಗಳಲ್ಲಿ ನಾನಾ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಿಸಿಬಿಗೆ ಹೆಚ್ಚುವರಿ ಆಯುಕ್ತರಾಗಿ ಅಲೋಕ್‌ಕುಮಾರ್ ವರ್ಗಾವಣೆಯಾದ ಬಳಿಕ ನಗರಾದ್ಯಂತ ರೌಡಿ ಚಟುವಟಿಕೆ ಹಾಗೂ ಸಂಘಟಿತ ಅಪರಾಧಗಳಲ್ಲಿ ಪಾಲ್ಗೊಂಡವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ರೌಡಿ ಜಾರ್ಜ್‌ನನ್ನು ಬಂಧಿಸುವ ಹೊಣೆಗಾರಿಕೆಯನ್ನು ಸಿಸಿಬಿ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರಿಗೆ ವಹಿಸಲಾಗಿತ್ತು. ಅವರು 2018ರ ಅಕ್ಟೋಬರ್‌ನಲ್ಲಿ ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿಯ ಮುಳ್ಳಕಟ್ಟಮ್ಮ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದ ಜಾರ್ಜ್‌ನನ್ನು ಬಂಧಿಸಲು ಮುಂದಾಗಿದ್ದರು. ಆದರೆ, ಪೊಲೀಸರ ಮೇಲೆಯೇ ಆತ ಮಾರಕಾಸ್ತ್ರಗಳನ್ನು ಹಿಡಿದು ದಾಳಿ ಮಾಡಿದ್ದ. ಈ ವೇಳೆ ಇನ್ಸ್‌ಪೆಕ್ಟರ್ ಬಲಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದರು.

ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಜಾರ್ಜ್, ಇನ್ಸ್‌ಪೆಕ್ಟರ್ ಪ್ರಕಾಶ್ ನಕಲಿ ಎನ್‌ಕೌಂಟರ್‌ನಲ್ಲಿ ನನ್ನನ್ನು ಮುಗಿಸಲು ಯೋಜನೆ ರೂಪಿಸಿದ್ದರು. ಹೀಗಾಗಿ, ಗುಂಡು ಹೊಡೆದಿದ್ದಾರೆ. ಹೀಗಾಗಿ ತನಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ಆತನ ಅರ್ಜಿ ತಿರಸ್ಕರಿಸಿದ್ದು, ಕೆಳ ನ್ಯಾಯಾಲಯಕ್ಕೆ ಹಾಜರು ಮಾಡಿದಾಗ ಎನ್‌ಕೌಂಟರ್ ಆರೋಪ ಯಾಕೆ ಮಾಡಲಿಲ್ಲ, ಎಂದು ಪ್ರಶ್ನಿಸಿ ಜಾಮೀನು ನೀಡಲು ನಿರಾಕರಿಸಿದೆ.

ಹೂವಿನ ವ್ಯಾಪಾರಿ ವೆಂಕಟೇಶ್ ಮತ್ತು ರಾಜು ಎಂಬುವರನ್ನು ಬೆಳಗ್ಗೆ 4 ಗಂಟೆ ವೇಳೆಗೆ ಅಪಹರಣ ಮಾಡಿದ್ದ ಜಾರ್ಜ್ ಅವರನ್ನು ಎಟಿಎಂ ಬಳಿಗೆ ಕರೆದೊಯ್ದು ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿದ್ದ. ಅಲ್ಲದೆ, ಅವರ ಮನೆಗೆ ಕರೆದೊಯ್ದು, ಮನೆ ಮಂದಿಯನ್ನೆಲ್ಲ ಬೆತ್ತಲೆಗೊಳಿಸಿ ಮತ್ತಷ್ಟು ಹಣ ಸುಲಿಗೆ ಮಾಡಿದ್ದ. ಈ ಬಗ್ಗೆ ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News