ಪ್ರತಿ ಸಮಿತಿಗೂ ಗೌಪ್ಯ ಚುನಾವಣೆ ನಡೆಸಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ ನಿರ್ಧಾರ

Update: 2019-01-15 16:00 GMT

ಬೆಂಗಳೂರು, ಜ.15: ಬಿಬಿಎಂಪಿಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ಉಂಟಾಗಬಾರದೆಂದು ಪ್ರತಿ ಸಮಿತಿಗೂ ಪ್ರತ್ಯೇಕವಾಗಿ ಗೌಪ್ಯ ಚುನಾವಣೆ ನಡೆಸಲು ಮೇಯರ್ ಗಂಗಾಂಬಿಕೆ ನಿರ್ಧರಿಸಿದ್ದಾರೆ.

ಜ.17ರಂದು ಎಲ್ಲ 12 ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಗುತ್ತಿದೆ. ಮೇಯರ್ ಕಚೇರಿಯಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಮೇಯರ್, ಉಪಮೇಯರ್, ಆಯಾ ಸಮಿತಿಯ 11 ಸದಸ್ಯರು ಹಾಗೂ ಚುನಾವಣಾ ಸಿಬ್ಬಂದಿ ಮಾತ್ರ ಹಾಜರಿರಲಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಸದಸ್ಯರು, ಶಾಸಕರಿಗೆ ಕಚೇರಿ ಪ್ರವೇಶವನ್ನು ನಿಷೇಧಿಸಲಾಗುವುದು.

ಮೇಯರ್ ವಿರುದ್ಧ ಆಕ್ರೋಶ: ನಿಯಮಬಾಹಿರವಾಗಿ ಚುನಾವಣೆ ನಡೆಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಮೇಯರ್ ಕ್ರಮದ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನ ಮಂಜುಳಾ ಮತ್ತು ದೇವದಾಸ್ ತಾವು ಸದಸ್ಯರಾಗಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವ ಕುರಿತು ಚಿಂತನೆ ನಡೆಸಿದ್ದಾರೆ. ಇದನ್ನು ತಡೆಯುವುದು ಗೌಪ್ಯ ಚುನಾವಣೆಯ ಉದ್ದೇಶ ಎಂದು ಆರೋಪಿಸಿದ್ದಾರೆ.

ನಿಯಮ ಬಾಹಿರವಲ್ಲ: ಮೇಯರ್ ನೇತೃತ್ವದಲ್ಲಿ ಆಯಾ ಸ್ಥಾಯಿ ಸಮಿತಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುತ್ತಿರುವುದು ಇದೇ ಮೊದಲಲ್ಲ. ಹಿಂದೆಲ್ಲ ಆಯಾ ಸ್ಥಾಯಿ ಸಮಿತಿ ಕಚೇರಿಗಳಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ಕ್ರಮೇಣ ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ನಡೆಸುವ ಪರಿಪಾಠ ಬೆಳೆಯಿತು. ಹೀಗಾಗಿ, ಮೇಯರ್ ನಿರ್ಧಾರ ನಿಯಮಬಾಹಿರವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News