ಕವಿ ತಿರುವಳ್ಳವರ್ ಪಾರ್ಕ್ ನಿರ್ಮಾಣಕ್ಕೆ ಸರಕಾರದೊಂದಿಗೆ ಮಾತುಕತೆ: ಶಾಸಕ ರೋಷನ್ ಬೇಗ್

Update: 2019-01-15 16:34 GMT

ಬೆಂಗಳೂರು, ಜ.15: ನಗರದ ಹಲಸೂರು ಕೆರೆ ಸಮೀಪ ತಮಿಳಿನ ಪ್ರಸಿದ್ಧ ಕವಿ ತಿರುವಳ್ಳವರ್ ಹೆಸರಿನಲ್ಲಿ ಉದ್ಯಾನವನ ಸ್ಥಾಪಿಸುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹಿರಿಯ ಶಾಸಕ ರೋಷನ್ ಬೇಗ್ ತಿಳಿಸಿದರು.

ಮಂಗಳವಾರ ಕೆಪಿಸಿಸಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ತಿರುವಳ್ಳವರ್ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿ ತಿರುವಳ್ಳವರ್ ತತ್ವಗಳು ಭಾಷಾ ಸೌಹಾರ್ದತೆ ಹಾಗೂ ಧರ್ಮಾತೀತವಾಗಿದೆ. ಇವರ ತತ್ವಗಳು ಸದಾ ಕಾಲಕ್ಕೂ ಜೀವಂತವಾಗಿರುವಂತಹದ್ದೆಂದು ಅಭಿಪ್ರಾಯಿಸಿದರು.

ತಮಿಳು ಭಾಷಿಕರಿಗೆ ಬೆಂಗಳೂರು ಆಶ್ರಯ ನೀಡಿದೆ. ಇಲ್ಲಿ ನೆಲೆ ನಿಂತಿರುವ ತಮಿಳರು ಸಹ ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ತಮಿಳು ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆಂದು ಅವರು ಹೇಳಿದರು.

ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರಿಸ್ ಮಾತನಾಡಿ, ಕವಿ ತಿರುವಳ್ಳವರ್ ತತ್ವಗಳು ಎಲ್ಲರು ಪಾಲಿಸುವಂತಾದರೆ, ಜಾತಿ, ಧರ್ಮ ಹಾಗೂ ಭಾಷೆಗಳ ಮಧ್ಯೆ ಕಲಹಗಳೆ ಸಂಭವಿಸುವುದಿಲ್ಲ. ಈಗಿನ ಸಮಸ್ಯೆಗಳಿಗೆ ಸಾವಿರಾರು ವರ್ಷಗಳ ಹಿಂದೆಯೆ ತಮ್ಮ ಕವಿತೆಗಳ ಮೂಲಕ ಪರಿಹಾರವನ್ನು ಕೊಟ್ಟು ಹೋಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News