ಸರಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಆರೋಗ್ಯ ಇಲಾಖೆ ಉಪ ಕಾರ್ಯದರ್ಶಿ ಸೇರಿ ಮೂವರ ಸೆರೆ

Update: 2019-01-15 16:37 GMT

ಬೆಂಗಳೂರು, ಜ.15: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದಡಿ ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆಯ ಉಪ ಕಾರ್ಯದರ್ಶಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆಯ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಹಾಗೂ ಈತನ ಸಹಚರರಾದ ಲಕ್ಷ್ಮೀ ನಾರಾಯಣ ಮತ್ತು ದೇವರಾಜ್ ಎಂಬಾತನನ್ನು ಇಲ್ಲಿನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ರಾಮಚಂದ್ರಯ್ಯ, ಈ ಹಿಂದೆ ಅಂಬೇಡ್ಕರ್ ಹಾಗೂ ದೇವರಾಜ್ ಅರಸು ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದಾಗ ಎಫ್‌ಡಿಎ ಮತ್ತು ಎಸ್‌ಡಿಯ ಹುದ್ದೆ ನೀಡುವುದಾಗಿ ನಂಬಿಸಿದ್ದ ಎಂದು ಹೇಳಲಾಗುತ್ತಿದೆ.

ಮಧ್ಯವರ್ತಿಗಳಾದ ಇಬ್ಬರು ಸಹಚರರ ಮೂಲಕ ಕೆಂಗೇರಿಯ ಹೊಟೇಲ್‌ವೊಂದರಲ್ಲಿ ಒಂದು ಹುದ್ದೆಗೆ ತಲಾ 12 ಲಕ್ಷ ರೂ. ಹಣ ಪಡೆದಿದ್ದ. ಬಳಿಕ ಉದ್ಯೋಗವನ್ನೂ ಕೊಡಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಚನ್ನಪಟ್ಟಣ ಮೂಲದ ಶ್ರೀಕಂಠಯ್ಯ ಎಂಬವರು ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ.

ದೂರಿನನ್ವಯ ಪ್ರಸ್ತುತ ಆರೋಗ್ಯ ಇಲಾಖೆಗೆ ವರ್ಗಾವಣೆಗೊಂಡಿದ್ದ ರಾಮಚಂದ್ರಯ್ಯ ಅವರನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News