ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿ ದರ್ಶನ

Update: 2019-01-15 16:41 GMT

ಬೆಂಗಳೂರು, ಜ.15: ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಪ್ರಕಾಶಿಸಿದವು. ಈ ವಿಸ್ಮಯವನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾತರದಿಂದ ಕಾದು ಆ ಕ್ಷಣವನ್ನು ಕಣ್ತುಂಬಿಕೊಂಡರು.

ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರಾಯಣ ಪುಣ್ಯ ಕಾಲವಾದ ಮಕರ ಸಂಕ್ರಾಂತಿಯಂದು ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಸಾಗುವ ವೇಳೆ ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯಸ್ನಾನದ ಸಂಭ್ರಮ ಇತ್ತು. ದೇಗುಲದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿತು.

ಮೊದಲು ಗವಿಗಂಗಾಧರೇಶ್ವರ ಸ್ವಾಮಿಯ ಪಾದ ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದ ಸೂರ್ಯಕಿರಣಗಳು ಇಡೀ ಶಿವಲಿಂಗವನ್ನು ಆವರಿಸಿತು. ಈ ಅವಧಿಯಲ್ಲಿ ದೇವರಿಗೆ ನಿರಂತರವಾಗಿ ಅಭಿಷೇಕ ನಡೆಯುತ್ತಿತ್ತು. ಸೂರ್ಯರಶ್ಮಿ ದೇವರನ್ನು ಸ್ಪರ್ಶಿಸಿ ಮರೆಯಾದ ನಂತರ ಮತ್ತೊಮ್ಮೆ ದೇವರಿಗೆ ಅಭಿಷೇಕ ಮಾಡಿ, ಪೂಜೆ ನಡೆಸಲಾಯಿತು.

ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾಯಿಸುವ ವೇಳೆ ನಂದಿಯ ಕೋಡಿನ ಮೂಲಕ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಈ ಅಪರೂಪದ ವಿದ್ಯಮಾನ ವರ್ಷಕ್ಕೊಂದು ಬಾರಿ ಈ ದೇವಸ್ಥಾನದಲ್ಲಿ ನಡೆಯುತ್ತದೆ. ಸಂಜೆ ಸಮಯ 5:25 ರಿಂದ 5:30ರವರೆಗೆ ಸೂರ್ಯರಶ್ಮಿ ಗವಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸುವ ಪ್ರಕೃತಿಯ ಅದ್ಭುತ ವಿದ್ಯಮಾನವನ್ನು ಅಚ್ಚರಿಯಿಂದ ಜನ ವೀಕ್ಷಿಸಿದರು.

ಭಕ್ತಾದಿಗಳಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲದೇ ಇದ್ದುದರಿಂದ ಎರಡು ಎಲ್‌ಇಡಿ ಪರದೆ ಹಾಗೂ ಹತ್ತು ಎಲ್ಇಡಿ ಪರದೆಗಳ ಮೂಲಕ ದೇವಸ್ಥಾನದೊಳಗಿನ ಕೌತುಕವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಇದನ್ನು ಕಣ್ತುಂಬಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News