ನಮ್ಮ ಮೆಟ್ರೋ ವಾರಾಂತ್ಯದಲ್ಲಿ ಹೆಚ್ಚುವರಿ ಕಾರ್ಯಾಚರಣೆ

Update: 2019-01-15 16:56 GMT

ಬೆಂಗಳೂರು, ಜ.15: ಪ್ರಯಾಣಿಕರ ಅನುಕೂಲಕ್ಕಾಗಿ ರವಿವಾರಗಳಂದು 7 ಗಂಟೆಯಿಂದಲೇ ಮೆಟ್ರೋ ಸೇವೆ ನೀಡಲು ಬಿಎಂಆರ್‌ಸಿಎಲ್ ನಿರ್ಧರಿಸಿದ್ದು, ಮುಂದಿನ ದಿನಗಳ ವಾರಾಂತ್ಯದಲ್ಲಿ ಒಂದು ಗಂಟೆ ಕಾಲ ಹೆಚ್ಚುವರಿ ಕಾರ್ಯಾಚರಣೆ ಮಾಡಲಿವೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಪ್ರತಿ ರವಿವಾರ ಬೆಳಗ್ಗೆ 8 ಗಂಟೆಗೆ ಮೆಟ್ರೋ ಸೇವೆ ಆರಂಭವಾಗುತ್ತದೆ. ಆದರೆ, ಸಾಮಾನ್ಯ ದಿನಗಳಂತೆಯೇ ರವಿವಾರವೂ ಬೆ.7 ರಿಂದಲೇ ಆರಂಭವಾಗಬೇಕು ಎಂಬ ಬೇಡಿಕೆ ಬಂದಿದ್ದರಿಂದ ಒಂದು ಗಂಟೆ ಮುಂಚಿತವಾಗಿ ಸೇವೆ ಆರಂಭ ಮಾಡಲಾಗುತ್ತಿದೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್, ಮೆಜೆಸ್ಟಿಕ್, ಯಶವಂತಪುರ ರೈಲು ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿರುವುದರಿಂದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದಿಳಿಯುವ ಪ್ರಯಾಣಿಕರಿಗೆ ಈ ಪರಿಷ್ಕರಣೆಯಿಂದ ಹೆಚ್ಚು ಅನುಕೂಲವಾಗುತ್ತದೆ. ವಾಯು ವಿಹಾರಕ್ಕೆ ತೆರಳುವವರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಅಭಿಪ್ರಾಯಿಸಲಾಗಿದೆ.

ಒಂದು ತಾಸು ಮುಂಚಿತವಾಗಿ ಸೇವೆ ಆರಂಭಿಸಿರುವುದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಎರಡೂ ಮಾರ್ಗಗಳಲ್ಲಿ 6 ಗಂಟೆಯಿಂದಲೇ ಸೇವೆ ಒದಗಿಸಬೇಕು. ಇದರಿಂದ ಹೆಚ್ಚು ಜನರಿಗೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಾದ ಪೇಸ್‌ಬುಕ್, ಟ್ವಿಟರ್‌ಗಳಲ್ಲಿ ಹಲವರು ಬಿಎಂಆರ್‌ಸಿಎಲ್ ಕ್ರಮವನ್ನು ಸ್ವಾಗತ ಮಾಡಿದ್ದಾರೆ. ಸೋಮವಾರ ಮುಂಜಾನೆ 4.45ಕ್ಕೆ ಸೇವೆ ದೊರೆತರೆ ಬೇರೆ ಊರುಗಳಿಂದ ಬಂದಿಳಿಯುವ ಪ್ರಯಾಣಿಕರು ಇದರ ಉಪಯೋಗ ಪಡೆಯಬಹುದು ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ರವಿವಾರ ತಡವಾಗಿ ರೈಲು ಸೇವೆ ಆರಂಭಿಸಲಾಗುತ್ತಿತ್ತು. ಆದರೆ, ಇದು ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಸೀಮಿತವಾದ ಕ್ರಮ ಎಂಬ ಟೀಕೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News