ಸಮಾನತೆಗೆ ಹೋರಾಟ ಅಗತ್ಯ: ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ

Update: 2019-01-15 16:59 GMT

ಬೆಂಗಳೂರು, ಜ.15: ದೇಶದಲ್ಲಿ ಶೋಷಿತರು ಸಾಮಾಜಿಕ ಸಮಾನತೆ, ಆರ್ಥಿಕ ಸ್ವಾವಲಂಬನೆಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಇದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ಇಂದಿಲ್ಲಿ ಹೇಳಿದರು.

ಮಂಗಳವಾರ ನಗರದ ಹೊರವಲಯದ ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ 63ನೇ ಹುಟ್ಟು ಹಬ್ಬದ ಅಂಗವಾಗಿ ಬಹುಜನ ಸಮಾಜ ಪಕ್ಷ (ಬೆಂಗಳೂರು ವಲಯ) ಆಯೋಜಿಸಿದ್ದ, ಜನ ಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಪ್ರಭುತ್ವ, ಪಾಳೆಗಾರಿಕೆ ತೊಲಗುವವರೆಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಕುಟುಂಬಗಳು ಉಸಿರಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಮುಂಬರುವ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರದಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಜನ್ಮದಿನವನ್ನು ದೇಶದಾದ್ಯಂತ ಬಹುಜನರು ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಡಾ.ಬಿ. ಆರ್.ಅಂಬೇಡ್ಕರ್, ಕಾನ್ಷಿರಾಂ ಅವರ ಆಶಯದಂತೆ ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ದಲಿತರು ಅಲ್ಲದೇ, ಎಲ್ಲ ವರ್ಗದವರಿಗೂ ಸಮನಾಗಿ ಅವಕಾಶ ಕೂಡುವ ಮೂಲಕ ಸಮರ್ಥ ಆಡಳಿತ ನೀಡಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬ್ರಿಟಿಷರ ಕಾಲದಿಂದಲೂ ದಲಿತರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಯಾವ ಬದಲಾವಣೆಗಳು ಆಗಿಲ್ಲ. ಇದಕ್ಕೆ ದಲಿತರು ಮತ್ತು ಶೋಷಿತರು ಅಧಿಕಾರದಿಂದ ವಂಚಿತರಾಗಿರುವುದೇ ಪ್ರಮುಖ ಕಾರಣ ಎಂದು ಹೇಳಿದರು.

ಮಾಯಾವತಿ ಅವರನ್ನು ದೇಶದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ, ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಂಕಲ್ಪಮಾಡಲಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಅತಿ ಹೆಚ್ಚು ಸ್ಥಾನ ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ವೃದ್ಧರಿಗೆ ಉಡುಪು ಮತ್ತು ಕಂಬಳಿ ವಿತರಣೆ ಮಾಡಲಾಯಿತು. ಈ ವೇಳೆ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕಚೇರಿ ಕಾರ್ಯದರ್ಶಿ ಆರ್.ಮುನಿಯಪ್ಪ, ಖಜಾಂಚಿ ನಹೀದಾ ಸಲ್ಮಾ, ಈರಣ್ಣ ಮೌರ್ಯ, ಪುರುಷೋತ್ತಮ್, ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News