6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಅಂಟಾರ್ಕ್ಟಿಕಾ ಮಂಜು

Update: 2019-01-15 17:09 GMT

ಕ್ಯಾಲಿಫೋರ್ನಿಯ, ಜ. 15: ಅಂಟಾರ್ಕ್ಟಿಕಾದ ಮಂಜು 1980ರ ದಶಕಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಂಟಾರ್ಕ್ಟಿಕ ಖಂಡದ ಅಂಚುಗಳಲ್ಲಿರುವ ಸಿಹಿನೀರಿನ ಮಂಜುಗಡ್ಡೆ ಹಾಳೆಗಳ ಮೇಲೆ ಸಾಗರದ ಬೆಚ್ಚಗಿನ ನೀರು ಬಡಿಯುತ್ತಿರುವುದು, ಮಂಜುಗಡ್ಡೆ ವೇಗವಾಗಿ ಕರಗಲು ಕಾರಣವಾಗಿದೆ.

1979 ಮತ್ತು 1990ರ ನಡುವಿನ ಅವಧಿಯಲ್ಲಿ ವಾರ್ಷಿಕವಾಗಿ ಮಂಜುಗಡ್ಡೆಯು ಕರಗುವ ಪ್ರಮಾಣ 4400 ಕೋಟಿ ಟನ್ (ವರ್ಷಕ್ಕೆ) ಆಗಿತ್ತು. ಈ ಪ್ರಮಾಣವು 2009 ಮತ್ತು 2017ರ ನಡುವಿನ ಅವಧಿಯಲ್ಲಿ 27,800 ಕೋಟಿ ಟನ್ (ವರ್ಷಕ್ಕೆ)ಗೆ ಏರಿದೆ.

ಇರ್ವಿನ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ ಮತ್ತು ‘ನಾಸಾ’ದಲ್ಲಿ ಭೂ ವ್ಯವಸ್ಥೆ ವಿಜ್ಞಾನಿ ಆಗಿರುವ ಎರಿಕ್ ರಿಗ್ನಾಟ್ ನೇತೃತ್ವದ ತಂಡವೊಂದು ನಡೆಸಿದ ಅಧ್ಯಯನವು ಈ ಬೆಳವಣಿಗೆಯನ್ನು ಪತ್ತೆಹಚ್ಚಿದೆ.

ಸಮುದ್ರ ಮಟ್ಟದಲ್ಲಿ 10 ಅಡಿ ಏರಿಕೆ?

ಜಾಗತಿಕ ತಾಪಮಾನ ಮತ್ತು ಓಝೋನ್ ಪದರ ನಾಶದಿಂದಾಗಿ ಸಾಗರದ ಶಾಖವು ಅಂಟಾರ್ಕ್ಟಿಕದ ಕಡೆಗೆ ಸಾಗುತ್ತಿದೆ ಹಾಗೂ ಅಂಟಾರ್ಕ್ಟಿಕ ಖಂಡದ ವೇಗವಾಗಿ ಕರಗುವ ಮಂಜು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗಿದೆ.

‘‘ಈ ಶತಮಾನದಲ್ಲೇ ಸಮುದ್ರ ಮಟ್ಟದಲ್ಲಿ 10 ಅಡಿ ಏರಿಕೆಯಾಗುವ ಸಾಧ್ಯತೆಯಿದೆ’’ ಎಂದು ರಿಗ್ನಾಟ್ ಹೇಳಿರುವುದಾಗಿ ‘ಯುಎಸ್‌ಎ ಟುಡೇ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News