ಮ.ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ 8,000 ಕೋ.ರೂ.ಗೂ ಹೆಚ್ಚು ಹಣ ದುರುಪಯೋಗ: ಸಿಎಜಿ ವರದಿ

Update: 2019-01-15 18:32 GMT

ಭೋಪಾಲ,ಜ.15: ಮಧ್ಯಪ್ರದೇಶದಲ್ಲಿ ಹಿಂದಿನ ಶಿವರಾಜ ಸಿಂಗ್ ನೇತೃತ್ವದ ಬಿಜೆಪಿ ಸರಕಾರದಡಿ ವಿವಿಧ ಇಲಾಖೆಗಳಲ್ಲಿ 8,107 ಕೋ.ರೂ.ಗಳ ಹಣಕಾಸು ಅಕ್ರಮಗಳು ಮಹಾ ಲೇಖಪಾಲ(ಸಿಎಜಿ)ರ ಕಚೇರಿಯು ನಡೆಸಿದ ಆಡಿಟ್‌ನಲ್ಲಿ ಬೆಳಕಿಗೆ ಬಂದಿವೆ.

ಮಧ್ಯಪ್ರದೇಶ ವ್ಯಾಪಾರ ಮತ್ತು ಹೂಡಿಕೆ ನೆರವು ನಿಗಮವು ಮಧ್ಯಪ್ರದೇಶದಲ್ಲಿ ಹೂಡಿಕೆ ಅಭಿಯಾನವೊಂದಕ್ಕಾಗಿ ರಾಜ್ಯ ಕೈಗಾರಿಕಾ ನಿರ್ದೇಶನಾಲಯವು ತನಗೆ ಬಿಡುಗಡೆಗೊಳಿಸಿದ್ದ ಸಹಾಯಧನದಲ್ಲಿ 8.96 ಕೋ.ರೂ.ಗಳನ್ನು 15 ವಿದೇಶ ಪ್ರವಾಸಗಳಿಗೆ ವ್ಯಯಿಸಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಸಿಎಜಿ ವರದಿಯು ಹೇಳಿದೆ. ಅಲ್ಲದೆ ಮರಳು ಗಣಿಗಾರಿಕೆ ಮತ್ತು ಪರಿಸರದ ಮೇಲೆ ಅದರ ಪರಿಣಾಮಗಳ ಕುರಿರು ಆಡಿಟ್ ನಡೆಸಿರುವ ಸಿಎಜಿ,ಬಾಲಾಘಾಟ್ ಮತ್ತು ಉಜ್ಜೈನ್‌ಗಳ ಮರಳು ಸಂಗ್ರಹಕಾರರು 31 ಗಣಿಗಳಲ್ಲ್ಲಿಯ ಅಂದಾಜು ಮರಳಿನ ಪ್ರಮಾಣದ ಬದಲು ನಿಷ್ಕ್ರಿಯ ಬಾಡಿಗೆಯ ಮೇಲೆ ಮೀಸಲು ಬೆಲೆಯನ್ನು ನಿಗದಿಗೊಳಿಸಿದ್ದು,ಇದರಿಂದಾಗಿ ರಾಯಧನ ಸಂಗ್ರಹದಲ್ಲಿ 3.37 ಕೋ.ರೂ.ಕಡಿಮೆಯಾಗಿದೆ ಎಂದೂ ವರದಿಯು ಬೆಟ್ಟು ಮಾಡಿದೆ.

18 ವಿಭಾಗಗಳ ಕಾರ್ಯಕಾರಿ ಅಭಿಯಂತರರು ವಿವಿಧ ಮೂಲಗಳಿಂದ ಬರಬೇಕಿದ್ದ 1,489.67 ರೂ.ಗಳ ನೀರಿನ ಬಾಕಿಯನ್ನು ವಸೂಲು ಮಾಡುವಲ್ಲಿ ವಿಫಲರಾಗಿದ್ದಾರೆ. 18 ಜಿಲ್ಲಾ ಗಣಿಗಾರಿಕೆ ಕಚೇರಿಗಳಲ್ಲಿ ಗಣಿಗಳನ್ನು ಭೋಗ್ಯಕ್ಕೆ ಪಡೆದವರಿಂದ ಮತ್ತು ಗುತ್ತಿಗೆದಾರರಿಂದ 62.50 ಕೋ.ರೂ.ಗಳ ರಾಯಧನವನ್ನು ವಸೂಲು ಮಾಡಿಲ್ಲ ಎಂದೂ ವರದಿಯು ಹೇಳಿದೆ.

ಇವು ಜ.11ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿರುವ 2017,ಮಾ.30ರವರೆಗಿನ ಅವಧಿಗೆ ಸಿಎಜಿ ಆಡಿಟ್ ವರದಿಯಲ್ಲಿ ಪಟ್ಟಿ ಮಾಡಲಾಗಿರುವ ಕೆಲವು ಲೋಪಗಳಷ್ಟೇ. 18,080 ಕೋ.ರೂ.ಗಳ ಸಹಾಯಧನದ ಬಳಕೆ ಪ್ರಮಾಣಪತ್ರಗಳು ಸಲ್ಲಿಕೆಯಾಗುವಂತೆ ನೋಡಿಕೊಳ್ಳುವಲ್ಲಿಯೂ ರಾಜ್ಯ ಸರಕಾರವು ವಿಫಲಗೊಂಡಿದೆ. ಭೋಪಾಲದ ಪುರಾತತ್ವ,ಪತ್ರಾಗಾರ ಮತ್ತು ಮ್ಯೂಝಿಯಂ ಆಯುಕ್ತರು 13ನೇ ಹಣಕಾಸು ಆಯೋಗದಡಿ 2013-14 ಮತ್ತು 2014-15ರ ನಡುವೆ ಸ್ವೀಕರಿಸಿದ್ದ 74 ಕೋ.ರೂ.ಗಳು ಬಳಕೆಯಾಗದಿದ್ದರೂ ಸಂಪೂರ್ಣ ಹಣ ಬಳಕೆಯಾಗಿದೆಯೆಂದು ಪ್ರಮಾಣಪತ್ರವನ್ನು ಸಲ್ಲಿಸಿರುವುದನ್ನೂ ವರದಿಯು ಬೆಟ್ಟು ಮಾಡಿದೆ. ಇನ್ನೂ ಹಲವಾರು ಇಲಾಖೆಗಳಲ್ಲಿಯ ಹಣಕಾಸು ಅಕ್ರಮಗಳನ್ನು ವರದಿಯು ಪಟ್ಟಿ ಮಾಡಿದೆ.

ಬಿಜೆಪಿ ಸರಕಾರದ ಹಣಕಾಸು ಅಕ್ರಮಗಳು ಮತ್ತು ದುರ್ಬಲ ಆರ್ಥಿಕ ನಿರ್ವಹಣೆಯು ಬಯಲಾಗಿದೆ. ಗುಂಪೊಂದು ಹಿಂದಿನ ಸರಕಾರಕ್ಕಾಗಿ ಹೇಗೆ ಕಾರ್ಯ ನಿರ್ವಹಿಸುತ್ತಿತ್ತು ಎನ್ನುವುದು ವರದಿಯಿಂದ ಸ್ಪಷ್ಟವಾಗಿದೆ. ಕೋಟ್ಯಂತರ ರೂ.ಗಳ ನಷ್ಟವಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿ ಮಂಡನೆ ಬಳಿಕ ಮುಖ್ಯಮಂತ್ರಿ ಕಮಲನಾಥ ಹೇಳಿದ್ದಾರೆ.

ಈ ಹಣಕಾಸು ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು. ‘ಜನ ಆಯೋಗ’ವನ್ನು ರಚಿಸಿ ಇಂತಹ ಎಲ್ಲ ಪ್ರಕರಣಗಳನ್ನು ಅದಕ್ಕೆ ಒಪ್ಪಿಸಲಾಗುವುದು. ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಎಜಿ ವರದಿ ಟ್ರೇಲರ್ ಮಾತ್ರ ಆಗಿದೆ. ಸಂಪೂರ್ಣ ಸಿನೆಮಾ ಇನ್ನಷ್ಟೇ ಬರಬೇಕಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News