ಯಡಿಯೂರಪ್ಪನವರದ್ದು 'ಬಸ್ ಸ್ಟಾಂಡ್ ಲವ್': ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ

Update: 2019-01-16 12:52 GMT

ಬೆಂಗಳೂರು, ಜ. 16: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರದು ‘ಬಸ್ ಸ್ಟಾಂಡ್ ಲವ್’, ಮದುವೆ ಆದವರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಇದು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಬುಧವಾರ ಇಲ್ಲಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳುವ ಆತಂಕ ನಮಗಿಲ್ಲ. ಏಕೆಂದರೆ ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಶಾಸಕರನ್ನು ಸೃಷ್ಟಿ ಮಾಡುವ ಪಕ್ಷವಾಗಿದೆ ಎಂದರು.

ನಮ್ಮ ಪಕ್ಷದೊಂದಿಗೆ ಜನರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿ ಹಲವು ನಾಯಕರು ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆಂದ ಅವರು, ಮದುವೆ ಮನೆಯಲ್ಲಿ ನಿದ್ದೆಗಣ್ಣಲ್ಲಿ ಕೈ ಹಾಕಿದರು ಎನ್ನುವಂತೆ ಬಿಜೆಪಿ ಒದ್ದಾಡುತ್ತಿದೆ ಎಂದು ಲೇವಡಿ ಮಾಡಿದರು.

ಮೈತ್ರಿ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಮದುವೆಯಾದ ಪತಿವ್ರತೆಯರನ್ನು ಕರೆದುಕೊಂಡು ಹೋಗಲು ಯಡಿಯೂರಪ್ಪ ಪ್ರಯತ್ನ ಮಾಡುವ ಮೂಲಕ ಆಮಿಷವೊಡ್ಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಬಸ್ ಸ್ಟಾಂಡ್ ಲವ್. ಬಸ್ ಸ್ಟಾಂಡ್ ‘ಬಸವಿಯರು’ ಮಾತ್ರ ಅವರೊಂದಿಗೆ ಹೋಗುತ್ತಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಇಷ್ಟಕ್ಕೆ ಬಿಜೆಪಿಗೆ ನೋವಾಗಿದೆ. ಏಕೆಂದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷ ಸೋಲುಂಡಿದೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆಯಿಲ್ಲ ಎಂದು ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ದುಡಿಯುವ ವರ್ಗದ ಜನರ ಬಾಯಿಗೆ ಮಣ್ಣು ಹಾಕಿದ್ದಾರೆ. ಎಚ್‌ಎಎಲ್ ಸಂಸ್ಥೆ ಮುಚ್ಚುವ ಹಂತ ತಲುಪಿದೆ. ಆದರೆ, ಉದ್ಯಮಿಗಳ ಪರ ಇರುವ ಕೇಂದ್ರ ಸರಕಾರ ರಫೇಲ್ ಡೀಲ್ ಗೆ ಮುಂದಾಗಿದೆ ಎಂದು ಟೀಕಿಸಿದ ಅವರು, ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News