ಬಿಜೆಪಿ ವಿರುದ್ಧ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ: ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್

Update: 2019-01-16 13:42 GMT

ಬೆಂಗಳೂರು, ಜ.16: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಕೆಡವಲು ಪ್ರತಿ ದಿನ ಪ್ರಯತ್ನ ಪಡುತ್ತಿರುವ ಬಿಜೆಪಿ ವಿರುದ್ಧ ಗುರುವಾರ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ಬುಧವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮತ್ತೆ ವಿಫಲವಾಗಿದೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ ಎಂದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷವೊಂದು ಈ ರೀತಿ ನಡೆದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದದ್ದು. ಚುನಾಯಿತ ಸರಕಾರವನ್ನು ಕೆಡವಲು ಯತ್ನಿಸುವ ಮೂಲಕ ಬಿಜೆಪಿ ಅಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಕಿಡಿಗಾರಿದರು.

ಇನ್ನು ಮುಂದಾದರೂ ಬಿಜೆಪಿ ಆಪರೇಷನ್ ಕಮಲ ಮಾಡುವುದನ್ನು ಬಿಡಬೇಕು. ನಮ್ಮ ಪಕ್ಷದ ಶಾಸಕರ ಬದಲು, ಮೊದಲು ಅವರು ತಮ್ಮ ಪಕ್ಷದ ಶಾಸಕರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆದುಕೊಂಡು ಬರುವ ಬಗ್ಗೆ ಚಿಂತಿಸಲಿ ಎಂದು ವೇಣುಗೋಪಾಲ್ ಹೇಳಿದರು.

ನಮ್ಮ ಪಕ್ಷದ ಶಾಸಕರು ಎಲ್ಲಿಯೂ ಹೋಗಿಲ್ಲ. ಎಲ್ಲರೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ನಾನು ಎಲ್ಲ ಶಾಸಕರ ಜೊತೆ ಸಂಪರ್ಕದಲ್ಲಿದ್ದೇನೆ. ಮಾಧ್ಯಮಗಳಲ್ಲಿ ನಮ್ಮ ಶಾಸಕರ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ, ಬಿಜೆಪಿಯವರು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಯಾರೊಬ್ಬರೂ ಚಕಾರವೆತ್ತುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕಿ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಮುಂದೆಯೂ ಇದೇ ಪಕ್ಷದಲ್ಲಿರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿಗೂ ಹೋಗುವುದಿಲ್ಲ. ನಾನು ನನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಬಾರದೇ ಎಂದರು.

ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಶನಿವಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ರವಿವಾರ ಗೋವಾ ಪ್ರವಾಸಕ್ಕೆ ಹೋಗಿದ್ದೆ. ಈ ಹಿಂದೆ ಬಿಜೆಪಿ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದು ನಿಜ. ಆದರೆ, ಈಗ ಯಾವ ನಾಯಕರೂ ನನ್ನ ಜೊತೆ ಮಾತನಾಡಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್‌ ಅಹ್ಮದ್‌ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News