ಹಳೇ ವಾಹನಗಳ ಚಾಲನೆ ನಿಲ್ಲಿಸಿ: ರಾಜ್ಯಪಾಲ ವಜುಭಾಯಿ ವಾಲಾ

Update: 2019-01-16 14:02 GMT

ಬೆಂಗಳೂರು, ಜ.16: ಇಂಧನ ಉಳಿಸುವ ನಿಟ್ಟಿನಲ್ಲಿ, ಹಳೇ ವಾಹನಗಳ ಚಾಲನೆ ನಿಲ್ಲಿಸಬೇಕು. ಈ ಸಂಬಂಧ ಸರಕಾರವು ನಿಯಮ ರೂಪಿಸಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದರು.

ಬುಧವಾರ ನಗರದ ಕಬ್ಬನ್ ಪಾರ್ಕ್‌ನ ಬಾಲಭವನ ಸಭಾಂಗಣದಲ್ಲಿ ಇಂಡಿಯನ್ ಆಯಿಲ್ ಸಂಸ್ಥೆ ಆಯೋಜಿಸಿದ್ದ, ಸಕ್ಷಮ 2019- ತೈಲ ಮತ್ತು ಅನಿಲ ಸಂರಕ್ಷಣಾ ಸಾಮೂಹಿಕ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ಬಳಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಬೇಕು. ಜೊತೆಗೆ, ಅವಧಿ ಪೂರ್ಣಗೊಂಡಿರುವ ವಾಹನಗಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ನಿಯಮ ತನ್ನಿ: ಬೈಕ್ ಮತ್ತು ಕಾರು ಎಷ್ಟು ಸಂಖ್ಯೆಯಲ್ಲಿರಬೇಕು ಎಂಬುದಕ್ಕೂ ನಿಯಮ ಮಾಡಬೇಕು. ಅಷ್ಟೇ ಅಲ್ಲದೆ, ಎಲ್ಲಿಯವರೆಗೂ ಈ ಬಗ್ಗೆ ಕಾನೂನು ರಚನೆ ಆಗುವುದಿಲ್ಲವೋ, ಅಲ್ಲಿಯವರೆಗೂ ವಿಚಾರ ಸಂಕಿರಣ, ಅಭಿಯಾನಗಳಿಂದ ಏನು ಪ್ರಯೋಜನ ಇಲ್ಲ. ಎಲ್ಲದಕ್ಕೂ ಕಠಿಣ ಕಾನೂನು, ನಿಯಮ ರೂಪಿಸಿದರೆ, ಮಾತ್ರ ಜನ ಅದನ್ನು ಪಾಲಿಸುತ್ತಾರೆ ಎಂದು ಅವರು ಸಲಹೆ ಮಾಡಿದರು.

ಪೆಟ್ರೋಲಿಯಂ ಉತ್ಪನ್ನಗಳ ಕಚ್ಚಾ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚು ಆದಾಯ ಗಳಿಕೆ ಉದ್ದೇಶದಿಂದ ಅತಿ ಹೆಚ್ಚು ಇಂಧನ ಮಾರಾಟ ಮಾಡಬೇಕು ಎಂದು ಕಂಪೆನಿಗಳೂ ಯೋಜನೆ ರೂಪಿಸಿಕೊಳ್ಳುತ್ತಾರೆ. ಆದರೆ, ಇದರಿಂದ ವಿದೇಶಕ್ಕೆ ನಾವು ಅಷ್ಟೇ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದರು.

ಇಂಡಿಯನ್ ಆಯಿಲ್ ನ ಪ್ರಧಾನ ವ್ಯವಸ್ಥಾಪಕ ರಾಜೇಶ್ ಕುಮಾರ್ ಸಾಯಲ್ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಒಂದು ಸಾಮೂಹಿಕ ಜವಾಬ್ದಾರಿಯಾಗಿದ್ದು, ಸಮಾಜದ ಪ್ರತಿ ಅಂಗಕ್ಕೂ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವುದರಲ್ಲಿ ನಂಟು ಹೊಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಪಿಸಿಎಲ್ ರಾಜ್ಯ ಮುಖ್ಯಸ್ಥ ರಾಹುಲ್ ಟಂಡನ್, ಎಚ್ ಪಿಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ ಸುಧಾಕರ್ ದತ್ತ, ಇಂಡಿಯನ್ ಆಯಿಲ್ ವ್ಯವಸ್ಥಾಪಕ ಕೆ.ಪ್ರಸಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News