ನ್ಯಾ.ಸದಾಶಿವ ಆಯೋಗ ಜಾರಿಗೆ ಸರಕಾರ ಬದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-17 13:23 GMT

ಬೆಂಗಳೂರು, ಜ.17: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಬಂಧ ನ್ಯಾ.ಸದಾಶಿವ ಆಯೋಗ ಸಲ್ಲಿಸಿರುವ ವರದಿ ಜಾರಿ ಸಂಬಂಧ ಕಾನೂನಿನ ವ್ಯಾಪ್ತಿಯಲ್ಲಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡು, ಚರ್ಚಿಸಿ ನ್ಯಾಯ ದೊರಕಿಸಿಕೊಡಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಬುಧವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸದಾಶಿವ ಆಯೋಗ ಜಾರಿಯಾಗಬೇಕು ಎಂಬುದು ದಲಿತರ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ನಿಮ್ಮ ಧ್ವನಿ ನನಗೆ ಕೇಳಿಸುತ್ತಿದೆ. ಅಲ್ಲದೆ, ವರದಿ ಜಾರಿಗೆ ಹಿಂದಿನ ಎಲ್ಲ ಸರಕಾರಗಳಿಗೆ ಮನವಿ ಸಲ್ಲಿಸಿರುವುದು ತಿಳಿದಿದೆ. ಹೀಗಾಗಿ, ಸಮ್ಮಿಶ್ರ ಸರಕಾರ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಪರಿಶಿಷ್ಟ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಪರಿಶಿಷ್ಟ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗುತ್ತದೆ. ಈ ಮೂಲಕ ಪರಿಶಿಷ್ಟರನ್ನು ಮೇಲೆತ್ತುವ ಕೆಲಸ ನಮ್ಮ ಸಮ್ಮಿಶ್ರ ಸರಕಾರ ಮಾಡುತ್ತದೆ ಎಂದು ಅವರು ತಿಳಿಸಿದರು.

ಅಣ್ಣ-ತಮ್ಮ: ರಾಜ್ಯದ ರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್.ಮುನಿಯಪ್ಪ ಹಿರಿಯರಾಗಿದ್ದು, ಅಣ್ಣ-ತಮ್ಮನಂತಿದ್ದಾರೆ. ಅವರ ಅನುಭವವನ್ನು ನಾವು ಬಳಸಿಕೊಳ್ಳಬೇಕು. ಅವರ ಬಗ್ಗೆ ಪರಿಶಿಷ್ಟ ಸಮುದಾಯಗಳ ನಾಯಕರು ಅನುಮಾನ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಪರಿಶಿಷ್ಟರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡುವ ಸಲುವಾಗಿ ಸದಾಶಿವ ಆಯೋಗವನ್ನು ರಚನೆ ಮಾಡಲಾಗಿತ್ತು. ಈ ಆಯೋಗ ವರದಿ ಸರಕಾರಕ್ಕೆ ಸಲ್ಲಿಸಿದ್ದು, ಸರಕಾರದ ಮಟ್ಟದಲ್ಲಿ ಸಮಗ್ರವಾಗಿ ಚರ್ಚೆಯಾಗಬೇಕು. ಇದನ್ನು ಅನುಷ್ಠಾನ ಮಾಡಲು ನಮ್ಮ ವಿರೋಧವಿಲ್ಲ. ನಾವೆಲ್ಲರೂ ಇದು ಜಾರಿಯಾಗಲೇಬೇಕು ಎಂದು ಬಯಸುತ್ತಿದ್ದೇವೆ ಎಂದು ಹೇಳಿದರು.

ಶೋಷಿತ ಸಮುದಾಯಗಳು ತಮ್ಮ ಹಕ್ಕು ಕೇಳಲು ಸಂವಿಧಾನದಲ್ಲಿ ಅವಕಾಶವಿದೆ. ಹಿಂದಿನ ಹಾಗೂ ಪ್ರಸ್ತುತ ಸರಕಾರ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ಶೇ.24.1 ರಷ್ಟು ಹಣವನ್ನು ಮೀಸಲಿಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ತಲಾ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಕೆ.ಎಚ್.ಮುನಿಯಪ್ಪ, ಧ್ರುವ ನಾರಾಯಣ, ಬಿ.ಎನ್.ಚಂದ್ರಪ್ಪ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಹಾಗೂ ಪರಿಸರ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಆರ್.ಧರ್ಮಸೇನಾ, ಅನ್ನದಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾಜದಲ್ಲಿ ಎಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸುಭದ್ರವಾಗಿ ಉಳಿಯಬೇಕು ಎಂದರೆ ಸಂವಿಧಾನ ಉಳಿಯಬೇಕು. ಪರಿಶಿಷ್ಟರ ಎಲ್ಲ ಸಮಸ್ಯೆಗಳನ್ನು ನಾನು ಹೇಳಿದರೆ ಅದು ಆಗಿ ಬಿಡುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಅಲ್ಲದೆ, ಮಂತ್ರಿಗಿರಿ ಸೇರಿದಂತೆ ಎಲ್ಲ ಸ್ಥಾನಗಳಿಗೂ ಖರ್ಗೆ ಹೇಳಿದರೆ ಆಗುತ್ತಿತ್ತು ಎಂದು ಎಲ್ಲವನ್ನೂ ನನ್ನ ಹೆಗಲ ಮೇಲೆ ಹಾಕುತ್ತಾರೆ. ನಾನೊಬ್ಬನೇ ಏನು ಮಾಡಲು ಸಾಧ್ಯವಿದೆ. ಎಲ್ಲ ಸಂಸದರನ್ನು, ಶಾಸಕರನ್ನು ಕೇಳಬೇಕು.

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ

ಕೇಂದ್ರ ಸರಕಾರ ಇತ್ತೀಚಿಗೆ ತಂದಿರುವ ಮೇಲ್ಜಾತಿ ಬಡವರಿಗೆ ಶೇ.10 ರಷ್ಟು ಮೀಸಲಾತಿಯನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಆದರೆ, ಇದನ್ನು ಅವರು ಅಧಿಕಾರಕ್ಕೆ ಬಂದಾಗಲೇ ಮಾಡಿದ್ದರೆ ಒಪ್ಪಬಹುದಿತ್ತು. ಈಗ ಚುನಾವಣೆ ಹತ್ತಿರವಾಗುತ್ತಿರುವಾಗ ಇದನ್ನು ಮಾಡಲು ಮುಂದಾಗಿರುವುದು ಚುನಾವಣಾ ಗಿಮಿಕ್ ಆಗಿದೆ.

-ಕೆ.ಎಚ್.ಮುನಿಯಪ್ಪ,ಸಂಸದ

ಸಮಾರಂಭದಲ್ಲಿ ಸಂಸದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಮಾತನಾಡುವ ಸಂದರ್ಭದಲ್ಲಿ ಕೆಲವು ದಲಿತ ನಾಯಕರು ಹಾಗೂ ಸಂಘಟನೆಗಳ ಕಾರ್ಯಕರ್ತರು ಸದಾಶಿವ ಆಯೋಗ ಜಾರಿಯಾಗಬೇಕು, ಸಮ್ಮಿಶ್ರ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News