ಸರಕಾರಿ ಸ್ವಾಮ್ಯದ ಉದ್ದಿಮೆಗಳ ಸ್ವಾಧೀನ-ಹಸ್ತಾಂತರ ಕಾಯ್ದೆ ಉಲ್ಲಂಘನೆ: ಎಐಬಿಓಸಿ ಆರೋಪ

Update: 2019-01-17 16:49 GMT

ಬೆಂಗಳೂರು, ಜ.17: ಕೇಂದ್ರ ಸರಕಾರ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾವನ್ನು ವಿಲೀನ ಮಾಡುವ ಮೂಲಕ ಸರಕಾರಿ ಸ್ವಾಮ್ಯದ ಉದ್ದಿಮೆಗಳ ಸ್ವಾಧೀನ ಹಾಗೂ ಹಸ್ತಾಂತರ ಕಾಯ್ದೆಯ ಮಾನದಂಡಗಳ ಸ್ವಷ್ಟ ಉಲ್ಲಂಘನೆ ಮಾಡಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ್, ಕೇಂದ್ರ ಸಂಪುಟದಿಂದ ಒಪ್ಪಿಗೆ ಪಡೆದು ಹಣಕಾಸು ಮಂತ್ರಿ ಅರುಣ ಜೇಟ್ಲಿ ಸೆ.17ರಂದು ಈ ವಿಲೀನ ಪ್ರಕ್ರಿಯೆಯನ್ನು ಮಾಡಿರುವುದು ಏಕಪಕ್ಷೀಯವಾಗಿದ್ದು, ಈ ನಿರ್ಧಾರ ಬ್ಯಾಂಕಿನ ಷೇರುದಾರರು ಗ್ರಾಹಕರ ಹಿತಕ್ಕೆ ವಿರುದ್ಧವಾಗಿದೆ. ಅಲ್ಲದೆ, ಬ್ಯಾಂಕಿನ ವಹಿವಾಟಿಗೆ, ಆರ್ಥಿಕ ದೃಢತೆ ಹಾಗೂ ಉದ್ಯೋಗಿಗಳಿಗೆ ಪೆಟ್ಟು ಕೊಡುವ ನಿರ್ಧಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ವಿಲೀನದ ನಂತರ ದೊಡ್ಡ ಬ್ಯಾಂಕುಗಳು ಗ್ರಾಹಕರ ಹಿತ ಕಾಯುತ್ತವೆ ಎಂಬುದಕ್ಕೆ ಏನು ಸಾಕ್ಷಿ? ದೊಡ್ಡ ಬ್ಯಾಂಕುಗಳಿಗಿಂತ ವಿಜಯಾ ಬ್ಯಾಂಕ್ ಅನೇಕ ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ವಿಲೀನದ ನಂತರ ಈಗಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗಿ ಬಿಡುತ್ತಾ? ಅದಕ್ಕೇನು ಮಂತ್ರ ದಂಡವಿದೆಯಾ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಜಗತ್ತಿನ ಅನೇಕ ಬ್ಯಾಂಕ್ ವಿಲೀನಗಳು ವಿಫಲವಾದ ಉದಾಹಣೆಗಳನ್ನು ಕಾಣಬಹುದು ಎಂದು ತಿಳಿಸಿದರು.

ಬ್ಯಾಂಕುಗಳ ವಿಲೀನದಿಂದಾಗಿ ಸ್ಟೇಟ್ ಬ್ಯಾಂಕ್ ಸೇರಿದಂತೆ ಅನೇಕ ಸರಕಾರಿ ಬ್ಯಾಂಕುಗಳು ಹೆಚ್ಚಾದ ಸುಸ್ತಿ ಸಾಲಗಳಿಂದ ನಷ್ಟದಲ್ಲಿದ್ದರೆ, ವಿಜಯಾ ಬ್ಯಾಂಕ್ ಸತತ ಮೂರು ವರ್ಷಗಳಿಂದ ನಿವ್ವಳ ಲಾಭಗಳಿಸಿದೆ. ಉದ್ಯೋಗಿಗಳ ಪರಿಶ್ರಮದಿಂದ ಬ್ಯಾಂಕಿನ ಸುಸ್ತಿಸಾಲದ ಪ್ರಮಾಣ ಶೇ.6.7 ರಷ್ಟು ಇದ್ದು, ಬ್ಯಾಂಕ್ ಆಫ್ ಬರೋಡ ಶೇ.12.5 ಹಾಗೂ ದೇನಾ ಬ್ಯಾಂಕ್ ಶೇ.22.7 ರಷ್ಟು ಸುಸ್ತಿಸಾಲವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.

ಉತ್ತಮ ಸಾಧನೆ ಮಾಡಿಕೊಂಡು ಬಂದಿರುವ ಲಾಭದಾಯಕ ವಿಜಯಾ ಬ್ಯಾಂಕನ್ನು ಸತತವಾಗಿ ಕಳಪೆ ಸಾಧನೆ ತೋರಿಸುತ್ತಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡುತ್ತಿರುವುದು ಸರಿಯಲ್ಲ. ತರಾತುರಿಯಲ್ಲಿ ರಾಜಕೀಯ ಲಾಭಕ್ಕಾಗಿ ವಿಲೀನದ ನಿರ್ಧಾರ ಪ್ರಕಟಿಸುವ ಮೊದಲು ಮೂರು ಬ್ಯಾಂಕುಗಳಲ್ಲಿ ಅತಿ ದೊಡ್ಡ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಸುಸ್ತಿ ಸಾಲದ ಪ್ರಮಾಣವನ್ನು ವಿಜಯಾ ಬ್ಯಾಂಕಿನ ಮಟ್ಟಕ್ಕೆ ಇಳಿಸಲು ಆದೇಶಿಸಬಹುದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ವಿಲೀನದಿಂದ ಮುಚ್ಚಿ ಹೋಗಿರುವ ಶಾಖೆಗಳಲ್ಲಿ ಇರುವ ಗ್ರಾಹಕರ ಗತಿಯೇನು? ಜನಧನದ ಹೆಸರಿನಲ್ಲಿ ಆಗಿರುವ ಸಾವಿರಾರು ಶಾಖೆಗಳ ಗ್ರಾಹಕರು ವಿಜಯಾ ಬ್ಯಾಂಕ್ ಬಿಟ್ಟು ಎಲ್ಲಿ ಹೋಗಬೇಕು? ಮೂರು ಬ್ಯಾಂಕುಗಳ ಆಯವ್ಯಯ ಪಟ್ಟಿ ಒಂದಾಗುತ್ತದೆ ಹೊರತು, ಸುಸ್ತಿ ಸಾಲಗಳ ಪ್ರಮಾಣವೇನು ಕಡಿಮೆಯಾಗುವುದಿಲ್ಲ. ಇದು ಕೇವಲ ಉದ್ದೇಶಪೂರ್ವಕ ಸುಸ್ತಿದಾರರಿಗೆ ಅನುಕೂಲ ಮಾಡಿ ಕೊಡುತ್ತೆಯಷ್ಟೇ ಎಂದು ಹೇಳಿದರು.

ಸದೃಢ ಬ್ಯಾಂಕುಗಳ ಹೆಸರಲ್ಲಿ ವಿಲೀನ ಮಾಡುತ್ತಿರುವ ಸರಕಾರ, ಇನ್ನೊಂದು ಹೊಸ ಬ್ಯಾಂಕುಗಳ ಆರಂಭಕ್ಕೆ ಲೈಸನ್ಸ್ ನೀಡುತ್ತಿರುವುದು ವಿಪರ್ಯಾಸ. ಸರಕಾರಿ ಬ್ಯಾಂಕುಗಳನ್ನು ಅಸ್ಥಿರಗೊಳಿಸಿ ಖಾಸಗಿಯವರಿಗೆ ಮಣೆ ಹಾಕುವ ಸ್ವಷ್ಟ ಹುನ್ನಾರವಾಗಿದ್ದು, ಸುಸ್ತಿ ಸಾಲಗಳಲ್ಲಿ ಶೇ.80ರಷ್ಟು ಸಾಲಗಳು ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳ ಹೆಸರಿನಲ್ಲಿವೆ ಎಂದು ದೂರಿದರು.

ರಘುರಾಮ್ ರಾಜನ್ ವರದಿ: ಮಾಜಿ ರಿಸರ್ವ್ ಬ್ಯಾಂಕ್‌ನ ಅಧ್ಯಕ್ಷ ರಘುರಾಮ್ ರಾಜನ್ ಸಂಸದೀಯ ಅಂದಾಜು ಸಮಿತಿಗೆ ಸಲ್ಲಿಸಿದ್ದ ವರದಿಯಲ್ಲಿ ಬ್ಯಾಂಕುಗಳ ವಿಲೀನವು ಸುಸ್ತಿ ಸಾಲದ ಸಮಸ್ಯೆಗೆ ಪರಿಹಾರವಲ್ಲ ಎಂದಿದ್ದಾರೆ. ಅವರ ಅಭಿಪ್ರಾಯದಂತೆ ಸುಸ್ತಿಸಾಲಗಳಿಂದ ಕಂಗೆಟ್ಟಿರುವ ಸರಕಾರಿ ಬ್ಯಾಂಕುಗಳನ್ನು ತುಂಬಾ ಜಾಗ್ರತೆಯಿಂದ ಸ್ವಚ್ಛ ಮಾಡುವ ಕಡೆಗೆ ಗಮನಕೊಡಬೇಕು. ಇಲ್ಲದಿದ್ದರೆ ಈ ಸಮಸ್ಯೆ ಮರುಕಳಿಸುವುದಲ್ಲದೆ ಬೃಹದಾಕಾರವಾಗಿ ಬೆಳೆದು ಸರಕಾರಿ ಬ್ಯಾಂಕುಗಳು ತಮ್ಮ ಮಾರುಕಟ್ಟೆಯನ್ನು ಖಾಸಗಿ ಹಣಕಾಸು ಕಂಪೆನಿಗಳಿಗೆ ಕಳೆದುಕೊಳ್ಳುವ ಪರಿಸ್ಥಿತಿ ಬರುವುದೆಂದು ಹೇಳಿದ್ದಾರೆ.

ವಾಣಿಜ್ಯ ಸುಸ್ತಿದಾರರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಬ್ಯಾಂಕುಗಳಲ್ಲಿರುವ ವಾಣಿಜ್ಯ ಸುಸ್ತಿದಾರರ ಪಟ್ಟಿ ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು. ಸುಸ್ತಿ ಸಾಲವಸೂಲಿಗೆ ಇರುವ ಕಾನೂನು ಕ್ರಮಗಳ ಸರಳೀಕರಣ ಹಾಗೂ ಅವುಗಳನ್ನು ಪಾರದರ್ಶಕತೆಗೊಳಿಸಬೇಕು ಎಂದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್‌ ಕಾನ್ಫೆಡರೇಷನ್ ಒತ್ತಾಯಿಸಿದೆ. ಲಾಭಾಂಶದಲ್ಲಿ ವ್ಯವಹಾರ ನಡೆಸುತ್ತಿರುವ ವಿಜಯಾ ಬ್ಯಾಂಕ್‌ನೊಂದಿಗೆ ನಷ್ಟದಲ್ಲಿರುವ ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾವನ್ನು ವಿಲೀನ ಮಾಡುತ್ತಿರುವುದು ಕೇಂದ್ರ ಸರಕಾರದ ಆರ್ಥಿಕ ದುರಂತ.

-ಎಸ್.ಕೆ.ಶ್ರೀನಿವಾಸ್, ಎಐಬಿಓಸಿ ರಾಜ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News