ಚುನಾವಣಾ ಅಕ್ರಮ: ಕೇರಳ ಶಾಸಕ ಅನರ್ಹ

Update: 2019-01-18 03:58 GMT

ಕೊಚ್ಚಿನ್, ಜ. 18: ಚುನಾವಣಾ ಅಕ್ರಮ ಎಸಗಿದ ಆರೋಪದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೊಡುವಲ್ಲಿ ಕ್ಷೇತ್ರದ ಶಾಸಕ ಕಾರಟ್ ರಝಾಕ್ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಕೆ.ಪಿ.ಮುಹಮ್ಮದ್ ಮತ್ತು ಮೊಯ್ದೀನ್ ಕುಂಞಿ ಎಂಬ ಇಬ್ಬರು ಮತದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಅಬ್ರಹಾಂ ಮ್ಯಾಥ್ಯೂ ಈ ಆದೇಶ ನೀಡಿದ್ದಾರೆ.

ಎಲ್‌ಡಿಎಫ್ ಬೆಂಬಲಿಸಿದ ಪಕ್ಷೇತರ ಶಾಸಕ ರಝಾಕ್ ಅನರ್ಹಗೊಂಡವರು. ಆದರೆ ಅವರ ನಿಕಟ ಪ್ರತಿಸ್ಪರ್ಧಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಎಂ.ಎ.ರಝಾಕ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲು ಹೈಕೋರ್ಟ್ ನಿರಾಕರಿಸಿದೆ.

ರಝಾಕ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಹೈಕೋರ್ಟ್, ತನ್ನ ತೀರ್ಪಿಗೆ ಎರಡು ತಿಂಗಳ ತಡೆಯಾಜ್ಞೆ ನೀಡಿದೆ. ಅನರ್ಹಗೊಂಡ ಶಾಸಕನಿಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನ ಪಡೆಯದಂತೆ ಮತ್ತು ಮತದಾನದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 573 ಮತಗಳ ಅಂತರದಿಂದ ಜಯಿಸಿದ್ದ ರಝಾಕ್, ತಮ್ಮ ಎದುರಾಳಿ ಎಂ.ಎ. ರಝಾಕ್ ವಿರುದ್ಧ ಕ್ಷೇತ್ರಾದ್ಯಂತ ಮಾನಹಾನಿಕರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದರು ಎಂದು ಅರ್ಜಿದಾರರು ವಾದಿಸಿದ್ದರು. ಎಂ.ಎ.ರಝಾಕ್ ಅವರು ಚುನಾವಣೆ ಸಂದರ್ಭದಲ್ಲಿ ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದರು. ಈ ಸಾಕ್ಷ್ಯಚಿತ್ರದಲ್ಲಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಎಂ.ಎ.ರಝಾಕ್ ದೋಷಮುಕ್ತರಾಗಿದ್ದರು.

ಈ ಸಾಕ್ಷ್ಯಚಿತ್ರ ಮತದಾರರ ಮೇಲೆ ಪ್ರಭಾವ ಬೀರಿತ್ತು ಎಂದು ತೀರ್ಪಿತ್ತ ಹೈಕೋರ್ಟ್, ಸಾಕ್ಷ್ಯಚಿತ್ರದ ಕ್ಯಾಮರಾಮನ್ ಹಾಗೂ ಚಿತ್ರ ಪ್ರದರ್ಶಿಸಿದ ಇತರರ ಹೇಳಿಕೆಗಳನ್ನು ಪಡೆದಿದೆ. ರಝಾಕ್ ಅವರ ಸೂಚನೆ ಮೇರೆಗೆ ಇದನ್ನು ಪ್ರದರ್ಶಿಸಲಾಗಿತ್ತು ಎಂದು ಇವರು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News