50 ವರ್ಷಕ್ಕಿಂತ ಕೆಳಗಿನ 51 ಮಹಿಳೆಯರು ಶಬರಿಮಲೆ ದೇವಳ ಪ್ರವೇಶಿಸಿದ್ದಾರೆ

Update: 2019-01-18 10:59 GMT

ಹೊಸದಿಲ್ಲಿ,ಜ.18 : ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದೆಂದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ನಂತರ ದೇವಳಕ್ಕೆ ಇಲ್ಲಿಯ ತನಕ  50 ವರ್ಷಗಳ ಕೆಳಗಿನ ವಯಸ್ಸಿನ 51 ಮಹಿಳೆಯರು ಪ್ರವೇಶಿಸಿದ್ದಾರೆಂದು ಕೇರಳ ಸರಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಇಂದು ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದ್ದಾರೆ.

ಶಬರಿಮಲೆ ದೇಗುಲವನ್ನು ಈ ತಿಂಗಳ ಆರಂಭದಲ್ಲಿ ಪ್ರವೇಶಿಸಿದ್ದ  ಕನಕದುರ್ಗ (42) ಮತ್ತು  ಬಿಂದು ಅಮ್ಮಣ್ಣಿ (44) ತಮಗೆ ರಕ್ಷಣೆ ಕೋರಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ  ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ವಕೀಲರು ಮೇಲಿನ ಮಾಹಿತಿ ನೀಡಿದ್ದಾರೆ. ದೇವಳ ಪ್ರವೇಶಿಸಿದ 51 ಮಹಿಳೆಯರ ಹೆಸರುಗಳಿರುವ ಪಟ್ಟಿಯನ್ನೂ ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

"ಈ ಬಾರಿ 50 ವರ್ಷದ ಕೆಳಗಿನ ಒಟ್ಟು 7,564 ಮಹಿಳೆಯರು ಅಯ್ಯಪ್ಪ ದರ್ಶನಕ್ಕಾಗಿ ನೋಂದಣಿ ಮಾಡಿಕೊಂಡಿದ್ದರು. ಅವರ ಆಧಾರ್ ಮಾಹಿತಿಗಳಿಂದ ಅವರ ವಯಸ್ಸು ದೃಢಪಟ್ಟಿದೆ.  ಆದರೆ ಅವರಲ್ಲಿ 51 ಮಂದಿ ದೇವಳಕ್ಕೆ ಭೇಟಿ ನೀಡಿದ್ದಾರೆ. ದೇವಳಕ್ಕೆ ಭೇಟಿ ನೀಡುವ ಭಕ್ತರ ವಯಸ್ಸನ್ನು ದೃಢೀಕರಿಸುವ ವ್ಯವಸ್ಥೆಯಿಲ್ಲ'' ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News