ಮಾತಿನ ಮೋಡಿಯಿಂದ ಮೋದಿ ಗೆಲ್ಲಲು ಸಾಧ್ಯವಿಲ್ಲ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-01-18 12:27 GMT

ಬೆಂಗಳೂರು,ಜ.18: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್‌ ಕಚ್ಚಾತೈಲ ಬೆಲೆ ಇಳಿಕೆಯಾದ್ದರಿಂದ ಉಳಿತಾಯವಾದ 1.40 ಸಾವಿರ ಕೋಟಿ ರು.ಗಳನ್ನು ಕೇಂದ್ರ ಸರಕಾರ ಏನು ಮಾಡಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು‌.

ಅರಮನೆ ಮೈದಾನದಲ್ಲಿ ಇಂದು ಆಯೋಜಿಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ.ಪಾಟೀಲ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಬ್ಯಾರಲ್‌ ಬೆಲೆ ಗಣನೀಯ ಇಳಿಕೆ ಕಂಡರೂ ಕೇಂದ್ರ ಸರಕಾರ 15 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಏರಿಸಿತ್ತು. ಇದರಿಂದ 1.40 ಲಕ್ಷ ಕೋಟಿ ರೂ. ಸರಕಾರಕ್ಕೆ ಆದಾಯ ಬಂದಿದೆ. ಆದರೆ ಈ ಹಣವನ್ನು ಪ್ರಧಾನಿ‌ ಮೋದಿ ಅವರು ಏನು‌ ಮಾಡಿದ್ದಾರೆ ? ಯಾವ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ ಎಂದು ಹೇಳಲಿ ಎಂದರು. 

ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲ‌ಮನ್ನಾ ಮಾಡುವಂತೆ ಹಿಂದಿನ‌ ಕಾಂಗ್ರೆಸ್‌ ಸರಕಾರ ಪ್ರಧಾನಿ ಅವರಲ್ಲಿ ಮನವಿ ಮಾಡಿತ್ತು. ಆದರೆ ಪ್ರಧಾನಿ‌ ಮೋದಿ ಮಾತ್ರ ರೈತ ವಿರೋಧಿ ನಿಲುವು ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಸುಳ್ಳು ಭರವಸೆ‌ ನೀಡಿ‌ ಪ್ರಧಾನಿಯಾದ ನರೇಂದ್ರ ಮೋದಿ‌ ಅವರ ಸುಳ್ಳು ಕೊನೆಗೂ ಬಹಿರಂಗವಾಗಿದೆ. ತಮ್ಮ ಮಾತಿನ ಮೂಲಕ ಜನರನ್ನು ಮೋಡಿ ಮಾಡಬಹುದು ಎಂದುಕೊಂಡರೆ ಅದು ಸುಳ್ಳು. ಮುಂದಿನ ಚುನಾವಣೆಯಲ್ಲಿ‌ ನಿಮ್ಮನ್ನು ಸೋಲಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ.‌ಪಾಟೀಲ್ ನೇಮಕಗೊಂಡಿದ್ದಾರೆ. ಇವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲೂ ಗೆದ್ದು ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಬೇಕು‌ ಎಂದು ಕರೆಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News