ಬಿಜೆಪಿಯವರು ಆಪರೇಷನ್ ಮಾಡುತ್ತಲೇ ಇರಬೇಕು, ಅದು ಅವರ ಕರ್ತವ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-18 13:41 GMT

ಬೆಂಗಳೂರು, ಜ.18: ಬಿಜೆಪಿಯವರು ಆಪರೇಷನ್ ಮಾಡುತ್ತಲೇ ಇರಬೇಕು. ಅದು ಅವರ ಕರ್ತವ್ಯ. ಅದು ಯಾವುದೂ ಯಶಸ್ವಿ ಆಗುವುದಿಲ್ಲ, ಮೈತ್ರಿ ಸರಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಇದೊಂದು ಸೌಹಾರ್ದ ಭೇಟಿ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದಾರೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಲ್ಲವನ್ನು ಕಾದುನೋಡಿ ಎಂದು ನಸು ನುಗುತ್ತಲೇ ಹೇಳಿ ಹೊರಟು ಹೋದರು.

ಜಾಧವ್‌ಗೆ ಉಜ್ವಲ ಭವಿಷ್ಯ: ಶಾಸಕ ಉಮೇಶ್ ಜಾಧವ್ ಪಕ್ಷದಲ್ಲೆ ಇದ್ದರೆ ಅವರಿಗೆ ಉಜ್ವಲ ಭವಿಷ್ಯವಿದೆ. ಒಂದು ವೇಳೆ ಬಿಜೆಪಿಗೆ ಹೋದರೆ ಅವರ ಭವಿಷ್ಯ ಹಾಳಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಇದೇ ವೇಳೆ ಹೇಳಿದರು.

ನಾನು ಉಮೇಶ್ ಜಾಧವ್ ಅವರೊಂದಿಗೆ ಮಾತನಾಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲೇ ಉಳಿಯುತ್ತೇನೆಂದು ಹೇಳಿದ್ದಾರೆ. ಅವರು ಬಿಜೆಪಿಗೆ ಹೋಗುವುದಿಲ್ಲವೆಂಬ ವಿಶ್ವಾಸ ಇದೆ. ಪಕ್ಷದ ಹಿರಿಯ ಮುಖಂಡ ರಮೇಶ್ ಜಾರಕಿಹೊಳಿ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಅಸಲಿ ಬಣ್ಣ ದಿನೆ ದಿನೇ ಬಯಲಾಗುತ್ತಿದೆ. ದೇಶದಲ್ಲಿ ಕಮಲವೇ ಇನ್ನು ಅರಳುವುದಿಲ್ಲ. ಕಮಲವೇ ಇಲ್ಲವೆಂದರೆ ಇನ್ನು ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ ಎಂದು ಈಶ್ವರ್ ಖಂಡ್ರೆ ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News