ಕೋಮುವಾದಿ ಧ್ವನಿ ತಗ್ಗಿಸಿ, ಪ್ರಜಾ ಧ್ವನಿ ಗಟ್ಟಿಗೊಳಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ: ಪ್ರಕಾಶ್ ರೈ

Update: 2019-01-18 13:48 GMT

ಬೆಂಗಳೂರು, ಜ.18: ಕೋಮುವಾದಿಗಳ ಧ್ವನಿಯನ್ನು ತಗ್ಗಿಸಿ, ಪ್ರಜೆಗಳ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾನೆ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನತೆ ಮತೀಯ ಶಕ್ತಿಗಳನ್ನು ಎದುರಿಸುತ್ತಿರುವಾಗ ಜನರ ಧ್ವನಿಯಾಗಿ, ಕೋಮುವಾದಿ ಶಕ್ತಿಯ ವಿರುದ್ಧ ಜನರನ್ನು ಉತ್ತೇಜಿಸಲು ಜನರ ಜೊತೆ ಇರಬೇಕು ಅನ್ನಿಸಿತ್ತು. ಹೀಗಾಗಿ, ಪ್ರಜೆಗಳ ಧ್ವನಿಯಾಗಿ ಸಮಾಜದ ಸ್ವಾಸ್ಥವನ್ನು ಕಾಪಾಡಲು ಹೆಜ್ಜೆ ಇಡುತ್ತಿದ್ದೇನೆ ಎಂದು ಹೇಳಿದರು.

ದೇಶದಲ್ಲಿರುವ ಎಲ್ಲ ರಾಜಕೀಯದವರು ಕಳ್ಳರೇ. ಅವರೆಲ್ಲ ಪ್ರಜೆಗಳಿಗಾಗಿ ಏನನ್ನು ಮಾಡುತ್ತಿದ್ದಾರೆ ಹೇಳಿ. ಜಾತಿ-ಧರ್ಮದ ಹೆಸರಲಿ ನಮ್ಮನ್ನು ಹೊಡೆದು ಆಳುತ್ತಿದ್ದಾರೆ. ಅವರಿಗೆ ಐದು ವರ್ಷಕ್ಕೊಮ್ಮೆ ಮಾತ್ರ ಪ್ರಜೆಗಳು ನೆನಪಾಗುತ್ತಾರೆ. ಅಲ್ಲದೆ, ಹಿಂದು, ಮುಸ್ಲಿಂ, ಕೈಸ್ತ ಧರ್ಮ ಮುಖ್ಯವಲ್ಲ. ತಮಿಳು, ತೆಲಗು, ಕನ್ನಡ ಭಾಷೆಯೂ ಮುಖ್ಯವಲ್ಲ. ಇವರೆಲ್ಲರ ಧ್ವನಿ ಮುಖ್ಯ. ಮಾನವೀಯ ಧರ್ಮ ಮುಖ್ಯ. ಹೀಗಾಗಿ, ಕೋಮುವಾದದ ವಿರುದ್ಧ ಎಲ್ಲರ ಧ್ವನಿಯಾಗಬೇಕು ಎಂದು ನುಡಿದರು.

ರಾಜಕೀಯದವರಿಗೆ ಪ್ರಜೆಗಳ ಧ್ವನಿ ಕೇಳುತ್ತಿಲ್ಲ. ಲಕ್ಷಾಂತರ ಜನರ ಓಟು ತೆಗೆದುಕೊಂಡು. ಉತ್ತರ ಕೊಡಬೇಕಾದವರು ಪಕ್ಷ ಬೆಳೆಸೋದಕ್ಕೆ, ಇನ್ನೊಬ್ಬರನ್ನು ಬೆಳೆಸೋದಕ್ಕೆ ಪ್ರೇರಕವಾಗಿದ್ದಾರೆಯೇ ಹೊರತು, ಜನಪರ ಧ್ವನಿಯಾಗಿಲ್ಲ. ಅಲ್ಲದೆ, ಬೆಂಗಳೂರಿನಿಂದಲೇ ನಾನು ನೆರೆ ರಾಜ್ಯಗಳಿಗೆ ಸಿನೆಮಾ ಮೂಲಕ ಪರಿಚಯವಾಗಿದ್ದು, ಹೀಗಾಗಿ, ದೇಶದಾದ್ಯಂತ ನನ್ನ ರಾಜಕೀಯ ಪ್ರಯಾಣವನ್ನು ಇಲ್ಲಿಂದಲೇ ಆರಂಭ ಮಾಡುತ್ತಿದ್ದೇನೆ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳ್ಳ, ನೀಚ, ಕೊಲೆಗಡುಕರನ್ನು ಕಂಡರೆ ಕೋಪ ಬರಬೇಕು. ಸಮಾಜದ ಸ್ವಾಸ್ಥಕ್ಕಾಗಿ ದುಡಿಯುವವರ ಜೊತೆ ಇರೋದಕ್ಕೆ ಸಮಸ್ಯೆಯಿಲ್ಲ. ಯಾರು ಕೋಮುವಾದದ ವಿರುದ್ಧ ಇದ್ದಾರೋ ಅವರ ಜೊತೆ ನಿಲ್ಲೋದು ತಪ್ಪೇನಿಲ್ಲ. ದಾರಿ ಬೇರೆ ಬೇರೆ ಇರಬಹುದು. ಗುರಿ ಮಾತ್ರ ಒಂದೇ. ಪಕ್ಷದ ಹಿತಾಸಕ್ತಿಗಿಂತ ಪ್ರಜೆಗಳ ಹಿತಾಸಕ್ತಿಯೇ ಇಲ್ಲಿ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.

2019 ರ ಲೋಕಸಭಾ ಚುನಾವಣೆಗೆ ಮೂರು ತಿಂಗಳು ಬಾಕಿಯಿದೆ. ಮೊದಲು ಪ್ರಜೆಯ ಅವಶ್ಯಕತೆಗಳನ್ನು ತಿಳಿಯಬೇಕು. ಸಮಸ್ಯೆಗಳೇನು ಎಂಬುದನ್ನು ಅರಿಯಬೇಕು. ಅನಂತರ ಪಕ್ಷದ ಪ್ರಣಾಳಿಕೆಯನ್ನು ಸಿದ್ಧ ಮಾಡಬೇಕು. ಹೀಗಾಗಿ, 20 ದಿನದೊಳಗಾಗಿ ಪ್ರಣಾಳಿಕೆ ಸಿದ್ಧ ಮಾಡುತ್ತೇವೆ ಎಂದರು.

ಬಿಜೆಪಿಯನ್ನು ಸೋಲಿಸೋಕೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ನಿಮಗೆ ಕಾಂಗ್ರೆಸ್ ಬೆಂಬಲ ಸೂಚಿಸಲಿದೆಯೇ ಎಂಬ ಪ್ರಶ್ನೆಗೆ, ಕೋಮುವಾದಿಗಳ ವಿರುದ್ಧ ಯಾರು ಬೆಂಬಲ ನೀಡಿದರೇನು? ಎಲ್ಲರ ಗುರಿಯೂ ಒಂದೇ ಅಲ್ಲವೇ. ಚಳುವಳಿ, ಹೋರಾಟ ನಮ್ಮ ಮಹತ್ವಾಕಾಂಕ್ಷೆಯಲ್ಲ. ಅದು ನಮ್ಮ ಹಕ್ಕು ಬಾಧ್ಯತೆಗಳ ಧ್ವನಿ. ಅಲ್ಲದೆ, ನಿಮ್ಮ (ಪತ್ರಕರ್ತರು) ಪ್ರಶ್ನೆ ನಿಮ್ಮದಲ್ಲ. ಅವು ಜನರ ಧ್ವನಿಯಾಗಿದೆ. ನನ್ನ ಎಲ್ಲ ನಡೆಗಳನ್ನು ನೀವು ನಡೆಸುತ್ತಿದ್ದೀರಾ ಎಂದು ಹೇಳಿದರು.

ಬೆಂಗಳೂರು ಸೆಂಟ್ರಲ್‌ನಲ್ಲೇ ಏಕೆ ಸ್ಪರ್ಧೆ?: ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಸಿನಿಮಾ ಜಗತ್ತು ಗಾಂಧಿನಗರದಲ್ಲಿ ಆಯ್ತು ಹಾಗೂ ಒಂದು ದಶಕದ ರಂಗಭೂಮಿ ನಂಟು ಸೇರಿದಂತೆ ನನಗೆ ಸಾಕಷ್ಟು ನೆನಪುಗಳು ಇಲ್ಲಿವೆ. ನನ್ನ ಸ್ನೇಹಿತರು, ಕುಟುಂಬಸ್ಥರು ಇಲ್ಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಗಳೂರು ಸೆಂಟ್ರಲ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಪ್ರಕಾಶ್ ರೈ ತಿಳಿಸಿದರು.

ಬಿಜೆಪಿಗೆ ಮಾನ-ಮರ್ಯಾದೆ ಬೇಡವಾ: ರಾಜ್ಯದಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತುಕೊಂಡು ಪ್ರಜೆಗಳಿಗೆ ಯಾವ ಸಂದೇಶ ರವಾನೆ ಮಾಡುತ್ತಿದೆ? ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮಾನ- ಮರ್ಯಾದೆ ಬೇಡವಾ, ಗೋಮಾತೆ ಅಂತಾರೆ, ಗೋಮಾತೆ ಹಬ್ಬದ ಆಚರಣೆ ದಿನ ರೆಸಾರ್ಟ್‌ನಲ್ಲಿ ಇರುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಜನರ ಪರವಾಗಿ ಕೆಲಸ ಮಾಡಲು ಯಾರಿಗೂ ಆಸಕ್ತಿ ಇಲ್ಲ. ಯೋಚನೆಯೂ ಇಲ್ಲ. ರಾಜ್ಯದ ಜನತೆ ಕಿವಿಗೆ ಹೂ ಇಟ್ಟುಕೊಂಡಿಲ್ಲ. ಎಷ್ಟು ದಿನದವರೆಗೂ ಬಿಜೆಪಿ ದೊಂಬರಾಟ ನಡೆಸುತ್ತಾರೋ ನೋಡೋಣ ಎಂದು ಕಿಡಿಕಾರಿದರು.

ನಾನು ಹಿಂದು, ಮುಸ್ಲಿಂ ಧರ್ಮದ ವಿರೋಧಿಯಲ್ಲ. ಆದರೆ, ಕೆಲವರು ನಮ್ಮ ನಂಬಿಕೆಗಳನ್ನು ಬಳಸಿಕೊಂಡು, ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ನಡೆಯಲ್ಲ. ಇವರೆಲ್ಲ ಮನುಷ್ಯ ಜನಾಂಗದ ವಿರೋಧಿಗಳು. 

-ಪ್ರಕಾಶ್ ರೈ, ಚಲನಚಿತ್ರ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News