ಮೋದಿಯಂತಹ ಸುಳ್ಳುಗಾರರನ್ನು ಹಿಂದೆಂದೂ ಕಂಡಿಲ್ಲ: ಸಿದ್ದರಾಮಯ್ಯ

Update: 2019-01-18 13:59 GMT

ಬೆಂಗಳೂರು, ಜ.18: ಪ್ರಧಾನಿ ನರೇಂದ್ರ ಮೋದಿ ಅಂತಹ ಮಹಾ ಸುಳ್ಳುಗಾರರನ್ನು ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಕಂಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ನಗರದ ಆರಮನೆ ಮೈದಾನದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ.ಎಚ್.ಪಾಟೀಲ್‌ರವರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾಸುಳ್ಳುಗಾರನೆಂದು ಬಿರುದು ಪಡೆದಿರುವ ನರೇಂದ್ರ ಮೋದಿ ಪ್ರಧಾನಿಯಾಗಿರುವುದು ದೇಶದ ಜನತೆಗೆ ಅಪಮಾನ ಮಾಡಿದಂತಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಹೇಳುವುದೊಂದು ಮಾಡುವುದೊಂದು ಜಗತ್ತಿಗೆ ಗೊತ್ತಾಗಿದೆ. ಆದರೂ ವಾಮ ಮಾರ್ಗದ ಮೂಲಕ ಸುಳ್ಳು ಭರವಸೆ, ಅಪಪ್ರಚಾರ ಮಾಡುವುದನ್ನು ಬಿಟ್ಟಿಲ್ಲ. ಇವರ ಸುಳ್ಳು ಪ್ರಚಾರ ಜನತೆಗೆ ತಲುಪುವ ಮೊದಲೆ, ಕಾಂಗ್ರೆಸ್ ಕಾರ್ಯಕರ್ತರು ಜನತೆಯ ಮನೆಗೆ ಹೋಗಿ ಮೋದಿಯ ಜನವಿರೋಧಿ ನೀತಿಗಳ ವಿರುದ್ಧ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ಹೇಳಿದರು.

ಆರೆಸ್ಸೆಸ್, ಬಿಜೆಪಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ದೇಶಕ್ಕೆ ಅಪಾಯಕಾರಿ. ಆ ಸಂಘಟನೆಗಳ ಇತಿಹಾಸದಲ್ಲಿ ಒಂದೇ ಒಂದು ಜನಪರವಾದಂತಹ ಕೆಲಸ ಮಾಡಿಲ್ಲ. ಜನರ ನಡುವೆ, ಜಾತಿ, ಧರ್ಮಗಳ ವಿಷ ಬೀಜ ಬಿತ್ತಿ, ಸದಾ ಗಲಭೆ ಸೃಷ್ಟಿಸುವಂತೆ ಮಾಡುತ್ತವೆ. ಆ ಮೂಲಕ ಅಧಿಕಾರಿ ಪಡೆಯಲು ಹವಣಿಸುತ್ತವೆ. ಇಂತಹ ಕೋಮುವಾದಿ ಬಿಜೆಪಿ ಯಾವುದೆ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಈಗಾಗಲೆ ದೇಶದಲ್ಲಿರುವ ಉದ್ಯೋಗವನ್ನು ಕಡಿತಗೊಳಿಸುವ ಮೂಲಕ ನಿರುದ್ಯೋಗವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಇಂತಹ ಪರಿಸ್ಥಿತಿಯಲ್ಲೂ ಮೇಲ್ಜಾತಿ ಬಡವರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತಂದು, ಯಾವ ಉದ್ಯೋಗವನ್ನು ಕೊಡುತ್ತಾರೆ. ಇದು ಸಹ ಕೇವಲ ಸುಳ್ಳಿನ ಭರವಸೆಯೆ ಆಗಲಿದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಬಿಜೆಪಿ ವಿರುದ್ಧ ಒಂದಾಗಲು ಕರೆ

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಎಚ್.ಕೆ.ಪಾಟೀಲ್ ಪದಗ್ರಹಣ ಸಮಾರಂಭವು ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ ವೇದಿಕೆಯಾಗಿಯೂ ಪರಿವರ್ತನೆಗೊಂಡಿತು. ನಗರದ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು, ಸಚಿವರು, ಶಾಸಕರು, ಸಂಸದರು, ಸಂಸದೀಯ ಕಾರ್ಯದರ್ಶಿಗಳು ಒಳಗೊಂಡಂತೆ ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಒಕ್ಕೊರಲಿನಿಂದ ವಿರೋಧಿಸಿದರು.

ಮುಂದಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ನಡೆದಿರುವ ಈ ಸಮಾರಂಭದಲ್ಲಿ, ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆಸುವುದು ಖಚಿತಗೊಂಡಿದ್ದು, ರಾಜ್ಯದ 28ಲೋಕಸಭಾ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳು ಗೆಲ್ಲಬೇಕು. ಆ ನಿಟ್ಟಿನಲ್ಲಿ ಪ್ರಚಾರ ತಂತ್ರಗಳನ್ನು ಈಗಿನಿಂದಲೆ ಜಾರಿಗೊಳಿಸಿ, ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಾಯಕರಿಂದ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

ಪ್ರಧಾನಿ ನರೇಂದ್ರ ಮೋದಿ ರಫೇಲ್ ಹಗರಣದಲ್ಲಿ ಭಾಗಿಯಾಗಿರುವುದು, ಫಸಲ್ ಬಿಮಾ ಯೋಜನೆಯ ಮೂಲಕ ಸಾವಿರಾರು ಕೋಟಿ ರೂ. ಹಣವನ್ನು ಅಂಬಾನಿ ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವುದು. ನಿರುದ್ಯೋಗದ ಹೆಚ್ಚಳ, ನೋಟು ನಿಷೇಧ ಹಾಗೂ ಜಿಎಸ್‌ಟಿಯಿಂದ ಜನತೆ ಹಾಗೂ ಸಣ್ಣ ಉದ್ಯಮಿಗಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿ, ಕೇಂದ್ರ ಸರಕಾರ ವಿರುದ್ಧ ಪ್ರಚಾರ ಮಾಡಲು ಕೆಪಿಸಿಸಿ ಸಿದ್ಧತೆಯಲ್ಲಿ ತೊಡಗಿರುವುದು ಇಂದು ನಡೆದ ಸಮಾರಂಭದ ಮೂಲಕ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News