ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕರಿಗೆ ನೋಟಿಸ್: ಸಿದ್ದರಾಮಯ್ಯ

Update: 2019-01-18 14:13 GMT

ಬೆಂಗಳೂರು, ಜ.18: ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವ ನಾಲ್ವರು ಶಾಸಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತೇನೆ. ಅವರಿಂದ ನೋಟಿಸ್‌ಗೆ ಉತ್ತರ ಬಂದ ಬಳಿಕ, ಪಕ್ಷದ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ನನಗೆ ಪತ್ರ ಬರೆದಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ನಮ್ಮ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಮಾತನಾಡಿದ್ದಾರೆ ಎಂದರು.

ಇನ್ನುಳಿದಂತೆ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ನಮ್ಮ ಜೊತೆ ಮಾತನಾಡಿಲ್ಲ. ಉಮೇಶ್ ಜಾಧವ್ ಬರೆದಿರುವ ಪತ್ರ ಹಾಗೂ ನ್ಯಾಯಾಲಯದಲ್ಲಿ ಕೆಲಸ ಇರುವುದಾಗಿ ನಾಗೇಂದ್ರ ನೀಡಿರುವ ಸ್ಪಷ್ಟಣೆಯ ಸತ್ಯಾಸತ್ಯತೆ ಕುರಿತು ನಾನು ಪರಿಶೀಲನೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಮಾಧ್ಯಮಗಳಲ್ಲಿ ಪ್ರತಿನಿತ್ಯ ಸಮ್ಮಿಶ್ರ ಸರಕಾರ ಇವತ್ತು ಬೀಳಲಿದೆ, ನಾಳೆ ಬೀಳಲಿದೆ, ಮುಂಬೈನಲ್ಲಿ ಅಷ್ಟು ಶಾಸಕರಿದ್ದಾರೆ, ದಿಲ್ಲಿಯಲ್ಲಿ ಅಷ್ಟು ಶಾಸಕರಿದ್ದಾರೆ ಎಂದು ಸುದ್ದಿಗಳು ಬರುತ್ತಿವೆ. ಇವೆಲ್ಲ ಸುಳ್ಳು ಎಂದು ರಾಜ್ಯ ಹಾಗೂ ದೇಶದ ಜನತೆಗೆ ತಿಳಿಸಲು ಈ ವಿಶೇಷ ಸಭೆಯನ್ನು ಕರೆಯಬೇಕಾಯಿತು. ನಮ್ಮ ಶಾಸಕರು ಯಾರು ಕೂಡ ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ಅವರು ತಿಳಿಸಿದರು.

ನಾಲ್ವರು ಶಾಸಕರು ಹೊರತುಪಡಿಸಿ 76 ಶಾಸಕರು ಸಭೆಗೆ ಹಾಜರಾಗಿದ್ದಾರೆ. ನಮ್ಮ ಒಗ್ಗಟ್ಟನ್ನು ನಾವು ಪ್ರದರ್ಶಿಸಿದ್ದೇವೆ. ಆಪರೇಷನ್ ಕಮಲಕ್ಕೆ ಕೈ ಹಾಕಿ ಎರಡು, ಮೂರು ಬಾರಿ ಬಿಜೆಪಿಗೆ ಮುಖಭಂಗವಾಗಿದೆ. ಆದರೂ, ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಬಿಡುತ್ತಿಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ನಮ್ಮ ಶಾಸಕರಿಗೆ 25, 50, 100 ಕೋಟಿ ರೂ.ಗಳನ್ನು ನೀಡುವ ಆಮಿಷ ಒಡ್ಡಿದ್ದಾರೆ. ಚೌಕಿದಾರರ ಪಕ್ಷ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಪ್ರಧಾನಿ ನರೇಂದ್ರಮೋದಿ ತನ್ನನ್ನು ಚೌಕಿದಾರ್ ಎನ್ನುತ್ತಾರೆ. ಚೌಕಿದಾರನಿಗೆ ಇಷ್ಟೊಂದು ಕೋಟಿ ದುಡ್ಡು ಎಲ್ಲಿಂದ ಬರುತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅನಿಲ್, ಶಿವಳ್ಳಿ, ಹೆಬ್ಬಾರ್, ಅಂಜಲಿ, ರಾಮಪ್ಪ ಸೇರಿದಂತೆ ನಮ್ಮ ಎಷ್ಟು ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ ಅನ್ನೋದನ್ನು ಸಾಕ್ಷಿ ಸಮೇತ ಮುಂದಿಡುತ್ತೇವೆ. ಹಣ ನೀಡುತ್ತೇವೆ, ಸಚಿವರನ್ನಾಗಿ ಮಾಡುತ್ತೇವೆ, ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ಆಸೆ, ಆಮಿಷಗಳನ್ನು ಒಡ್ಡಿ, ನಮ್ಮ ಶಾಸಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಬಿಜೆಪಿಯ ಶಾಸಕರು ಗುರುಗ್ರಾಮದ ರೆಸಾರ್ಟ್‌ನಲ್ಲಿ ಏನು ಮಾಡುತ್ತಿದ್ದಾರೆ. ರಾಜ್ಯದಿಂದ ಹಿಡಿದು ಕೇಂದ್ರ ನಾಯಕರು, ಕೇಂದ್ರ ಸಚಿವರು, ಆಪರೇಷನ್ ಕಮಲದ ಮೂಲಕ, ರಾಜ್ಯದ ಸಮ್ಮಿಶ್ರ ಸರಕಾರ ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ. ಬಿಜೆಪಿ ನಡೆಸಿರುವ ಸಮೀಕ್ಷೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ 3-4 ಸ್ಥಾನಗಳನ್ನು ಮಾತ್ರ ಅವರು ಗೆಲ್ಲಲಿದ್ದಾರೆ. ಆದುದರಿಂದ, ಲಜ್ಜೆಗೆಟ್ಟು, ಮಾನಗೆಟ್ಟು ಸ್ವತಃ ಮೋದಿ, ಅಮಿತ್ ಶಾ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ನಮ್ಮ ಶಾಸಕರಿಗೆ ಬಿಜೆಪಿ ಹಿಂಸೆ ನೀಡುತ್ತಿದೆ. ಆಪರೇಷನ್ ಕಮಲಕ್ಕೆ ಬಲಿಯಾಗದಿರಲಿ ಎಂಬ ಕಾರಣಕ್ಕೆ ಎಲ್ಲ ಶಾಸಕರು ಒಂದು ಕಡೆ ಇರುತ್ತೇವೆ. ಪಕ್ಷದ ವಿಚಾರ, ಬರಗಾಲ, ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚೆ ಮಾಡುತ್ತೇವೆ. ನಾವೇನು ದಿಲ್ಲಿಗೋ, ಗುರುಗ್ರಾಮಕ್ಕೋ ಹೋಗುವುದಿಲ್ಲ ಎಂದು ಅವರು ಹೇಳಿದರು.

ಆಪರೇಷನ್ ಕಮಲ ಅನ್ನೋ ಪದ ಚಾಲ್ತಿ ಬಂದದ್ದು 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ. ಇಂತಹ ಲಫಂಗ ರಾಜಕಾರಣ ಆರಂಭಿಸಿದ್ದೆ ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಸಭೆಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು.

ಸಿದ್ದರಾಮಯ್ಯಗೆ ಜಾಧವ್ ಪತ್ರ

ಅನಾರೋಗ್ಯದಿಂದಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ತನಗೆ ವಿನಾಯಿತಿ ನೀಡುವಂತೆ ಕೋರಿ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News